ಅರ್ಹರಿಗೆ ಸರ್ಕಾರಿ ಸವಲತ್ತು ತಲುಪಲಿ: ಶಾಸಕ ಸಾ.ರಾ. ಮಹೇಶ್
ಕ.ಪ್ರ.ವಾರ್ತೆ , ಕೆ.ಆರ್. ನಗರ , ಮೇ 24
ಸರ್ಕಾರದ ಸವಲತ್ತು ವಿತರಣೆ ಮಾಡಲು ಅರ್ಹರನ್ನು ಆಯ್ಕೆ ಮಾಡುವಾಗ ಸ್ಥಳೀಯರು ತಮ್ಮ ಸಹಕಾರ ನೀಡಿ ಸವಲತ್ತು ಉಳ್ಳವರ ಪಾಲಾಗದಂತೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಕೈಜೊಡಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಸವಲತ್ತುಗಳ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸವಲತ್ತು ಪಡೆಯಲು ಅರ್ಜಿ ಸಲ್ಲಿಸುವವರೂ ಅದರ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 65 ಮಂದಿಗೆ ತಲಾ 25 ಸಾವಿರ ಸಹಾಯ ಧನದ ಚೆಕ್ ವಿತರಿಸಲಾಗುತ್ತಿದ್ದು, ಇದರಲ್ಲಿ ಐದು ಸಾವಿರ ರು.ಗಳನ್ನು ನಿಗದಿತ ಅವಧಿಯೊಳಗೆ ಫಲಾನುಭವಿಗಳು ಸರ್ಕಾರಕ್ಕೆ ವಾಪಸ್ ಪಾವತಿಸಿ, ಉಳಿಕೆ ಹಣದ ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಿದಾಗ ಸರ್ಕಾರದ ಸಹಾಯ ಧನಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಧಿಕ್‌ಖಾನ್, ಪುರಸಭಾ ಸದಸ್ಯರಾದ ಎನ್. ಶಿವಕುಮಾರ್, ಉಮೇಶ್, ಕೆ.ಎಲ್. ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಇ. ಯೋಗಾನಂದ, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಸಾ.ರಾ. ಸಿ.ಜೆ.ಆನಂದ, ಶಿವಲಿಂಗೇಗೌಡ ಇದ್ದರು.