ಗುತ್ತಿಗೆ ಪೌರ ಕಾರ್ಮಿಕರ ಕಾಯಂಗೆ ಆಗ್ರಹ
ಕ.ಪ್ರ.ವಾರ್ತೆ , ಮೈಸೂರು , ಮೇ 24
ಕಾಂಗ್ರೆಸ್ ಪ್ರಣಾಳಿಕೆಯಂತೆ ಭರವಸೆ ನೀಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೆ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಮೈಸೂರು ನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್. ಮಾರ ಮನವಿ ಮಾಡಿದರು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕಾಯಂ ಪೌರ ಕಾರ್ಮಿಕರು, ಮಲ, ಮೂತ್ರ, ಕಸ-ಕಡ್ಡಿ ತೆಗೆದು ಅನಾರೋಗ್ಯಪೀಡಿತರಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡಬೇಕು. ಪೌರ ಕಾರ್ಮಿಕರ ಮಕ್ಕಳನ್ನು ಸರ್ಕಾರ ದತ್ತುಪಡೆದು ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪೌರ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು. ನಗರ ಪಾಲಿಕೆಯಿಂದ ಪೌರ ಕಾರ್ಮಿಕ ಜನಾಂಗದ 70 ಮಕ್ಕಳಿಗೆ ಆರೋಗ್ಯ ಪರಿವೀಕ್ಷಕರ ತರಬೇತಿ ಕೊಡಿಸಿದ್ದು, ಅವರೆಲ್ಲಾ ತೇರ್ಗಡೆಯಾಗಿದ್ದಾರೆ. ಆದ್ದರಿಂದ ಇವರಿಗೆ ಉದ್ಯೋಗ ಕೊಡಿಸಬೇಕು. ವಸತಿ ವಂಚಿತ ಪೌರ ಕಾರ್ಮಿಕರಿಗೆ ಸರ್ಕಾರ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸದ್ಯದಲ್ಲಿಯೆ ಮೈಸೂರಿನಿಂದ ಬೆಂಗಳೂರಿಗೆ ಕಾಲ್ನಿಡಿಗೆ ಜಾಥಾ ನಡೆಸುವುದಾಗಿ ತಿಳಿಸಿದರು.
ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್, ಪಾಲಿಕೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಗುರುನಾಥ್, ಉಪಾಧ್ಯಕ್ಷ ಮಂಚಯ್ಯ ಇದ್ದರು.