ವಂತಿಗೆ ಹಾವಳಿ ವಿರುದ್ಧ ಎಬಿವಿಪಿ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಮೇ 24
ಶಾಲಾ, ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಡೆಗಟ್ಟಲು ಕೇಂದ್ರೀಯ ಪ್ರವೇಶ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.
ಶಿಕ್ಷಣ ವ್ಯಾಪಾರೀಕರಣದ ವಿರುದ್ಧ ಪ್ರಬಲ ಕಾನೂನು ರೂಪಿಸಲು ಮತ್ತು ಕಾನೂನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ ಎಬಿವಿಪಿ ಕಾರ್ಯಕರ್ತರು, ಹಲವು ಶಾಲೆಗಳು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹಿಸುತ್ತಿವೆ.
ಆದರೂ ಸರ್ಕಾರ ಏಕೆ ಮೌನವಾಗಿದೆ. ಖಾಸಗಿ ಶಾಲಾ, ಕಾಲೇಜಿನವರು ನಿರ್ಧರಿಸಿದ ಶುಲ್ಕ ಹಾಗೂ ಡೊನೇಷನ್ ಎಷ್ಟು ವೈಜ್ಞಾನಿಕವಾಗಿದೆ ಎಂದು ಪ್ರಶ್ನಿಸಿದರು.
ಡೊನೇಷನ್‌ಗೆ ನಿಯಂತ್ರಣ ಹಾಕಬೇಕು. ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಪ್ರತಿ ಹಂತದಲ್ಲಿಯೂ ರೋಸ್ಟರ್ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಜ್ಯದಲ್ಲಿನ ಟ್ಯೂಷನ್ ಹಾವಳಿ ನಿಯಂತ್ರಿಸಬೇಕು, ಪಠ್ಯಪುಸ್ತಕ, ಯೂನಿಫಾರ್ಮ್, ಇತರೆ ಶೈಕ್ಷಣಿಕ ಸಾಮಗ್ರಿಗಳನ್ನು ನಮ್ಮಲ್ಲಿಯೆ ಕೊಂಡುಕೊಳ್ಳಬೇಕು ಎಂಬ ಕಡ್ಡಾಯ ಇರಬಾರದು, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಡಿಇಡಿ, ಬಿಇಡಿ ಕಾಲೇಜುಗಳಲ್ಲಿ ಸಾಮೂಹಿಕ ನಕಲು ತಡೆಗೆ, ಶಿಕ್ಷಣದ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಮತ್ತು ಕಡ್ಡಾಯ ಶಿಕ್ಷಣ ಮಸೂದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ನಗರ ಕಾರ್ಯದರ್ಶಿ ವೆಂಕಟೇಶ್, ರಾಕೇಶ್ ಇತರರು ಇದ್ದರು.