ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶುದ್ಧ ನೀರು ಕುಡಿಯಲು ಮೈಗ್ರಾಪ ಸಲಹೆ

Vishwanath S
Updated On : 24 May 2013, 11:00 am

ಕ.ಪ್ರ.ವಾರ್ತೆ ,  ಮೈಸೂರು ,  ಮೇ 24
ನಗರದ ನಿವಾಸಿಗಳು ನಲ್ಲಿ ನೀರಿನ ಬಳಕೆ ಬಗ್ಗೆ ಹುಷಾರಾಗಿರುವಂತೆ ಹಾಗೂ ಶುದ್ಧೀಕರಿಸಿ ಕುಡಿಯುವುದು ಒಳ್ಳೆಯದು ಎಂದು ಮೈಸೂರು ಗ್ರಾಹಕರ ಪರಿಷತ್‌ನ ಪ್ರೊ.ಎ. ರಾಮಲಿಂಗಂ ತಿಳಿಸಿದ್ದಾರೆ. ಆಕ್ವಗಾರ್ಡ್‌ನಂತಹ ಸಲಕರಣೆಯನ್ನು ಬಳಸಿಯಾಗಲಿ, ನೀರನ್ನು 10 ರಿಂದ 15 ನಿಮಿಷ ಕುದಿಸಿಯಾಗಲಿ ಅಥವಾ ಶುಭ್ರ ತಾಮ್ರದ ತಗಡನ್ನು ನೀರನಲ್ಲಿ 24 ಗಂಟೆ ಮುಳಿಗಿಸಿಯಾಗಲಿ, ನೀರಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯ ನಾಶ ಮಾಡಬಹುದು ಎಂದು ಹೇಳಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ಕುಸಿದ ಹಾಗೆ ಅದರ ಮಾಲಿನ್ಯ ಹೆಚ್ಚಾಗುತ್ತಿದೆ. ಕೊಳಚೆ ನೀರು ಜಲಾಶಯ ಸೇರುತ್ತಿದೆ. ಆದರೆ, ಅದನ್ನು ತೆಳುವಾಗಿಸಲು ಜಲಾಶಯದಲ್ಲಿ ಸಾಕಷ್ಟು ನೀರಿಲ್ಲ. ಹೀಗಾಗಿ ನೀರಿನ ಸೂಕ್ಷ್ಮಾಣು ಮಾಲಿನ್ಯ ಹೆಚ್ಚಾಗುತ್ತಿದೆ. ಅಲ್ಲದೆ, ನೀರಿನ ಮಟ್ಟ ಕೆಳಗಿಳಿದ ಹಾಗೆ ಸೂರ್ಯನ ಕಿರಣಗಳು ನೀರನ್ನು ಹೆಚ್ಚಾಗಿ ಭೇದಿಸಿ ಅದರ ತಾಪಮಾನ ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ 22 ರಿಂದ 25 ಡಿಗ್ರಿ ಉಷ್ಣಾಂಶವಿರುವ ನೀರು ಈಗ ಸುಮಾರು 30 ಡಿಗ್ರಿಗಳಷ್ಟು ಬಿಸಿಯಾಗುತ್ತದೆ. ಮಲದಲ್ಲಿರುವ ಸೂಕ್ಷ್ಮಾಣುಗಳು ಬೆಚ್ಚಗಿನ ನೀರಿನಲ್ಲಿ ಹೆಚ್ಚು ವೇಗದಿಂದ ವರ್ಧಿಸುತ್ತವೆ ಮತ್ತು ನೀರಿನಲ್ಲಿರುವ ರೋಗಕಾರಿ ಸೂಕ್ಷ್ಮಾಣುಗಳ ಸಂಖ್ಯೆ ಬಹಳ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ ನೀರಿಗೆ ಸಾಮಾನ್ಯವಾಗಿ ಮಾಡುವ ಸಂಸ್ಕರಣವು ಅದನ್ನು ಕುಡಿಯಲು ಯೋಗ್ಯವನ್ನಾಗಿ ಮಾಡುತ್ತದೆಯೇ ಎಂಬುದು ಸಂದೇಹಾಸ್ಪದ. ಆದ್ದರಿಂದ ನಲ್ಲಿ ನೀರನ್ನು ಕುಡಿಯುವುದರಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು.
ಬ್ಯಾಕ್ಟೀರಿಯಾಗಳಿಗೆ ಮಾನವರನ್ನು ಪದೇ ಪದೇ ಈಡು ಮಾಡಿದರೆ ಅವರು ಈ ಬ್ಯಾಕ್ಟೀರಿಯಾಗಳು ಉಂಟುಮಾಡುವ ರೋಗಗಳಿಗೆ ನಿರೋಧಶಕ್ತಿ ಬೆಳೆಸಿಕೊಳ್ಳುವ ಸಂಭವವಿದೆ. ನಗರದಲ್ಲಿ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಇನ್ನೂ ಹರಡಿದರುವುದಕ್ಕೆ ಈ ನಿರೋಧಶಕ್ತಿ ಕಾರಣವಿರಬಹುದು. ಆದರೆ, ನಾವು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ, ಬೆಂಕಿಯೊಡನೆ ಆಟವಾಡಿದಂತೆ ಎಂದು ಎಚ್ಚರಿಸಿದ್ದಾರೆ.
ನಲ್ಲಿಯ ನೀರಿನ ಪ್ರದೂಷಣದಿಂದ ಕಳೆದ ಹಲವು ವರ್ಷಗಳಲ್ಲಿ ಬೋಗಾದಿ, ಪಡುವಾರಹಳ್ಳಿ ಮುಂತಾದ ಜಾಗಗಳಲ್ಲಿ ಸ್ಥಳೀಕರಿಸಿದ ಸಾಂಕ್ರಾಮಿಕಗಳು ಹರಡಿದ್ದು, ಅವುಗಳಲ್ಲಿ ಜನರು ಸತ್ತಿದ್ದಾರೆ. ಇನ್ನೂ ಗಂಭೀರವಾದ ವಿಪತ್ತು ಸಂಭವಿಸುವ ಮುನ್ನ ನಗರಪಾಲಿಕೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನೀರನ್ನು ಶುದ್ಧೀಕರಿಸುವ ವಿಧಾನಗಳ ಬಗ್ಗೆ ಪ್ರಶ್ನೆಗಳಿದ್ದರೆ ಮೈಗ್ರಾಪ  ದೂ. 2515150 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement