ಸಿಂಗಲೀಕ ಮರಿ ಜನನ
ಕ.ಪ್ರ.ವಾರ್ತೆ , ಮೈಸೂರು , ಮೇ 24
ನಗರದ ಮೃಗಾಲಯದಲ್ಲಿನ ಸಿಂಗಲೀಕ ಮರಿಯೊಂದಕ್ಕೆ ಜನ್ಮ ನೀಡಿದೆ. ಪಶ್ಚಿಮ ಘಟ್ಟ ಪ್ರದೇಶದ ಅಪರೂಪದ ಪ್ರಾಣಿಗಳಲ್ಲಿ ಸಿಂಗಲೀಕ ಕೂಡ ಒಂದು. ಮೈಸೂರು ಮೃಗಾಲಯದಲ್ಲಿನ ಸುಮಾರು ಏಳೆಂಟು ಸಿಂಗಲೀಕಗಳ ಪೈಕಿ ಯಾವೊಂದು ಸಹ ಇದುವರೆಗೆ ಜನ್ಮ ನೀಡಿರಲಿಲ್ಲ. ಕಳೆದ ಬಾರಿ ಹುಟ್ಟಿದ್ದ ಮರಿಯೊಂದು ಕೆಲವೆ ದಿನಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು.
ಆದರೆ, ಈ ಸಿಂಗಲೀಕ ಕಳೆದ ಮೇ 10 ರಂದೆ ಮರಿಗೆ ಜನ್ಮ ನೀಡಿದೆ. ಆದರೆ, ತನ್ನ ಮರಿಯನ್ನು ತಾನೆ ಜೋಪಾನವಾಗಿ ಆರೈಕೆ ಮಾಡುತ್ತಿದೆ. ತಪ್ಪದೆ ಹಾಲು ಕುಡಿಸುತ್ತಿದೆ. ಇದರಿಂದಾಗಿ ಮರಿಯೂ ಆರೋಗ್ಯವಾಗಿದೆ ಎಂದು ಡಾ. ಸುರೇಶ್ ತಿಳಿಸಿದ್ದಾರೆ. ಹುಲಿಯಂತೆಯೆ ಬಲು ಅಪರೂಪ ಮತ್ತು ಮಹತ್ವದ ಪ್ರಾಣಿಯಾದ ಸಿಂಗಲೀಕದ ಜನನ ಪ್ರಮಾಣ ಮೈಸೂರು ಮೃಗಾಲಯದಲ್ಲಿ ಕಡಿಮೆ ಇತ್ತು. ಹೆಣ್ಣು ಸಿಂಗಲೀಕಕ್ಕೆ ಹೊಂದುವಂತಹ ಗಂಡು ಸಿಂಗಲೀಕ ಸಿಗುತ್ತಿರಲಿಲ್ಲ.
ಈಗ ಆ ಎಲ್ಲಾ ಕೊರತೆ ನಿವಾರಣೆಯಾಗಿದೆ. ಮತ್ತೊಂದು ಸಿಂಗಲೀಕ ಗರ್ಭ ಧರಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಈಗ ಜನಿಸಿರುವ ಸಿಂಗಲೀಕ ಗಂಡೋ- ಹೆಣ್ಣೋ ಎಂಬುದು ತಿಳಿದಿಲ್ಲ. ಏಕೆಂದರೆ ತಾಯಿ ಸಿಂಗಲೀಕ ತನ್ನ ಮರಿಯನ್ನು ಕೆಳಗೆ ಬಿಟ್ಟಿಲ್ಲ.