ಕೆಪಿಎಸ್ಸಿ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮೇ 25
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ನಡೆಸಿರುವ ಸಂದರ್ಶನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿ ಸೂಕ್ತ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿರುವ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಖಿಲ ಕರ್ನಾಟಕ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.
ಕೆಪಿಎಸ್ಸಿ ಭ್ರಷ್ಟತೆ ಇರುವ ಸಂದರ್ಶನ ವಜಾಗೊಳಿಸಿ, ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಸೂಕ್ತ ಹುದ್ದೆಗೆ ಭರ್ತಿ ಮಾಡಬೇಕು.
ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಕೆಪಿಎಸ್ಸಿ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಅರಕೆರೆ ಗ್ರಾಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಜಿಲ್ಲಾಧ್ಯಕ್ಷ ಶ್ರೀಧರ್ ಬೆಟ್ಟ, ಪದಾಧಿಕಾರಿಗಳಾದ ಕೆರೆಹಳ್ಳಿ ಮಾದೇಶ್, ರಾಜು, ಬೆಟ್ಟನಾಯಕ, ಚೆನ್ನಾಪ್ಪಾಜಿನಾಯಕ, ಪ್ರಕಾಶ್, ಶ್ರೀನಿವಾಸ್ ಕಡಕೊಳ, ನಿಂಗರಾಜ್, ಮಂಜು, ಸೋಮಣ್ಣ, ಬೀರಲಿಂಗು, ಅರ್ಜುನ, ಎಚ್.ಆರ್. ಪ್ರಕಾಶ್, ಕೆ. ಮಲ್ಲೇಶ್, ಮಹದೇವಣ್ಣ ಇದ್ದರು.