ನೀತಿ ಸಂಹಿತೆ ಉಲ್ಲಂಘನೆ: 12 ಪ್ರಕರಣ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 25
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಮಾದರಿ ನೀತಿ ಸಂಹಿತೆಯಡಿ ಈವರೆಗೂ 12 ಪ್ರಕರಣಗಳು ದಾಖಲಾಗಿದೆ.
12 ಎಫ್ಐಆರ್ ದಾಖಲಾಗಿದ್ದು, ಒಟ್ಟು 3.67 ಲಕ್ಷ ನಗದು ಹಾಗೂ 227 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಮೇ 28 ರಂದು ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತವು ಸಂಪೂರ್ಣವಾಗಿ ಸಜ್ಜುಗೊಂಡಿದೆ. ಮತದಾನವು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಕ್ಷೇತ್ರದಲ್ಲಿ 83,287 ಪುರುಷರು, 79,110 ಮಹಿಳೆಯರು ಸೇರಿ ಒಟ್ಟು 1,62,397 ಮಂದಿ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 205 ಮತಗಟ್ಟೆಗಳಿಗೆ 1006 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಇಬ್ಬರು ಮತದಾನಾಧಿಕಾರಿ ನೇಮಿಸಲಾಗಿದೆ. ಇವರೊಂದಿಗೆ ಸ್ಥಳೀಯವಾಗಿ ಒಬ್ಬರು ಡಿ ಗ್ರೂಪ್ ಹಾಗೂ ಮತದಾರರನ್ನು ಗುರುತಿಸಲು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದ್ದಾರೆ.
ಮತನಾಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹೋಗಬೇಕಾದ ಸ್ಥಳಗಳಿಗೆ ಮೇ 27ರ ಬೆಳಗ್ಗೆ 5.30ಕ್ಕೆ ಆಯಾ ತಾಲೂಕುಗಳಿಂದ ಹೊರಡಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಪಿರಿಯಾಪಟ್ಟಣದ ಗೋಪಿಕೊಪ್ಪ ರಸ್ತೆಯಲ್ಲಿರುವ ಪುಷ್ಪ ಕಾನ್ವೆಂಟ್ನಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯಲಿದೆ ಎಂದು ಹೇಳಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ 27 ಕೆಎಸ್ಆರ್ಟಿಸಿ ಬಸ್ಸುಗಳು, 7 ಮೆಟಾಡಾರ್, 25 ಸರ್ಕಾರಿ ವಾಹನ ಉಪಯೋಗಿಸಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಜಾತ್ರೆಗಳನ್ನು ಮುಂದೂಡಲಾಗಿದೆ. ಮತಗಟ್ಟೆಗಳಲ್ಲಿ ಮೊಬೈಲ್, ಕ್ಯಾಮರಾ ಬಳಕೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಭದ್ರತೆ: ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಪೊಲೀಸರು ಮತ್ತು ರಕ್ಷಣಾ ಪಡೆ ಸಿಬ್ಬಂದಿ ನೇಮಿಸಲಾಗಿದೆ. ಆಯ್ದ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ, ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಲಾಗಿದೆ. ಅತೀಸೂಕ್ಷ್ಮ ಹಾಗೂ ವಲ್ನರೇಬಲ್ ಇರುವಂತಹ 11 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮೇ 31ರ ಬೆಳಗ್ಗೆ 8ಕ್ಕೆ ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ನಲ್ಲಿ ಮತಎಣಿಕೆ ಕಾರ್ಯ ನಡೆಯಲಿದೆ. ಎಲ್ಲಾ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಕೋರಿದ್ದಾರೆ.