ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುರಾತತ್ವ ಇಲಾಖೆ ಖಾಲಿ ಹುದ್ದೆ ಶೀಘ್ರ ಭರ್ತಿ

Rashmi Kasaragodu
Updated On : 25 May 2013, 11:47 am

ಕ.ಪ್ರ.ವಾರ್ತೆ   ಮೈಸೂರು   ಮೇ 25
ಪುರಾತತ್ವ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವೆ ಚಂದ್ರೇಶ್ ಕುಮಾರಿ ಕಟೋಜ್ ಹೇಳಿದರು.
ಶನಿವಾರ ನಗರದ ಸೆನೆಟ್ ಭವನದಲ್ಲಿ ನಡೆದ ಅಖಿಲ ಭಾರತ ಪುರಾತತ್ವ ಸೇವಾ ಸಂಘದ ಸುವರ್ಣ ಮಹೋತ್ಸವ ಹಾಗೂ 27ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದೇಶಾದ್ಯಂತ 3678 ಸ್ಮಾರಕ ಸಂರಕ್ಷಿಸಲಾಗಿದೆ. ಕೇವಲ 2500 ಮಂದಿ ಮಾತ್ರ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ನಾಲ್ಕು ವರ್ಷದಿಂದ 1872 ಹುದ್ದೆಗಳು ಖಾಲಿಯಾಗಿವೆ ಎಂದು ತಿಳಿಸಿದರು.
ವೀರಪ್ಪ ಮೊಯ್ಲಿ ನೇತೃತ್ವದ ಆಡಳಿತ ಸುಧಾರಣ ಆಯೋಗವು ಪುರಾತತ್ವ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು 10 ಸಾವಿರ ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ವರದಿ ನೀಡಿದೆ. ಈ ವರದಿಯನ್ನು ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರ ಗಮನಕ್ಕೆ ತರುತ್ತೇನೆ. ಶೀಘ್ರವೇ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಆತುರದಲ್ಲಿ ಕೆಲವು ನೀತಿ- ನಿಯಮಗಳನ್ನು ಉಲ್ಲಂಘಿಸಬಾರದು. ಆದ್ದರಿಂದ ಪ್ರಧಾನಿ ಹಾಗೂ ಎಐಸಿಸಿ ವರಿಷ್ಠೆ ಸೋನಿಯಾಗಾಂಧಿ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶ್ರೀವಸ್ತವ್ ಪ್ರಾಸ್ತಾವಿಕ ಭಾಷಣ ಮಾಡಿ, ಪುರಾತತ್ವ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳ ಕೊರತೆ ಇದೆ. ಪಾರಂಪರಿಕ ಕಟ್ಟಡ ಸಂರಕ್ಷಿಸುವ ಕೆಲಸಕ್ಕೆ ಕ್ಷೇತ್ರಾಧಿಕಾರಿಗಳ ಅವಶ್ಯಕತೆ ಇದೆ. ಹೀಗಾಗಿ ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ (ದಕ್ಷಿಣ) ಪ್ರಾದೇಶಿಕ ನಿರ್ದೇಶಕ ಡಾ.ಡಿ. ದಯಾಲನ್, ಬೆಂಗಳೂರು ವೃತ್ತದ ಅಧೀಕ್ಷಕ ಡಾ.ಎಂ. ನಂಬಿರಾಜನ್, ಅಖಿಲ ಭಾರತ ಪುರಾತತ್ವ ಸೇವಾ ಸಂಘದ ಅಧ್ಯಕ್ಷ ಎಸ್.ಸಿ. ಶರ್ಮಾ, ಬಿ.ಎ. ಚಂದ್ರಶೇಖರ್, ಎ.ಕೆ. ಸಿನ್ಹಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement