ಬಿ ಫಾರಂ ಮಾರಾಟ: ಮುನಿಯಪ್ಪ ಆರೋಪ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 25
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬಿ ಫಾರಂಗಳನ್ನು ಕೋಟಿಗಟ್ಟಲೆ ಹಣ ಪಡೆದು ಮಾರಿಕೊಂಡಿವೆ ಎಂದು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಒಂದು ಬಿ ಫಾರಂಗೆ 5 ರಿಂದ 15 ಕೋಟಿಗಳಿಗೆ ಮಾರಿಕೊಂಡಿದ್ದು, ಚುನಾವಣೆಯಲ್ಲಿ 20 ಕೋಟಿ ಖರ್ಚು ಮಾಡಲು ಬದ್ಧನಾಗಿದ್ದ ಆಕ್ಷಾಂಕ್ಷಿಗೆ ಮಾತ್ರ ಬಿ ಫಾರಂ ನೀಡಲಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಸಹಾ 5 ರಿಂದ 10 ಕೋಟಿಗೆ ಬಿ ಫಾರಂ ಮಾರಿಕೊಂಡಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇ 5ರಂದು ನಡೆದ ಚುನಾವಣೆಯಲ್ಲಿ ಬಿಎಸ್ಪಿ ಗೆಲ್ಲಬಹುದಾಗಿದ್ದ 5 ಸ್ಥಾನಗಳಲ್ಲಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಪಿರಿಯಾಪಟ್ಟಣ ಕ್ಷೇತ್ರದಲ್ಲಿ 60 ಸಾವಿರ ಹಿಂದುಳಿದ ವರ್ಗಗಳ ಮತದಾರರಿದ್ದು, ಅವರು ಮತ್ತು ಮೇಲ್ವರ್ಗದವರು ಸಹ ಪಕ್ಷದ ಅಭ್ಯರ್ಥಿ ಕೃಷ್ಣ ಪರ ಒಲವು ತೋರಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಎನ್. ಮಹೇಶ್ ಮಾತನಾಡಿ, ಉತ್ತಮ ರಸ್ತೆಗಳು ಸಂಸ್ಕೃತಿ ಮತ್ತು ನಾಗರಿಕತೆ ಬಿಂಬಿಸುತ್ತವೆ. ಆದರೆ, ಕ್ಷೇತ್ರದ ಶೇ. 90 ರಷ್ಟು ರಸ್ತೆಗಳು ಹದಗೆಟ್ಟಿದ್ದು, ಇದು ಮಾಜಿ ಶಾಸಕ ಕೆ. ವೆಂಕಟೇಶ್ ಮತ್ತು ಸ್ಥಳೀಯ ಅಧಿಕಾರಿಗಳು ನಾಚಿಸುವಂತಿದೆ. ಕ್ಷೇತ್ರದಲ್ಲಿ ಬದಲಾವಣೆಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ಕ್ಷೇತ್ರದ ಮತದಾರರು ಬಿಎಸ್ಪಿ ಅಭ್ಯರ್ಥಿ ಕೃಷ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಕೃಷ್ಣ, ತಾ. ಅಧ್ಯಕ್ಷ ದೇವರಾಜು, ಜಿಲ್ಲಾ ಕಾರ್ಯದರ್ಶಿ ಶಿವರಾಜ್, ತಾ. ಉಪಾಧ್ಯಕ್ಷ ಮಂಜು, ತಾ. ಸಂಚಾಲಕ ಈರಾಜ್ ಇದ್ದರು.