ಶಾಂತಿಯುತ ಮತದಾನಕ್ಕೆ ಕ್ರಮ: ಐಜಿಪಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 25
ಚುನಾವಣೆಯು ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಕೆ. ರಾಮಚಂದ್ರರಾವ್ ಹೇಳಿದರು.
ಇಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಭೇಟಿ ನೀಡಿ ಚುನಾವಣೆ ಬಂದೋಬಸ್ತ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ, ಮೇ 28ರಂದು ನಡೆಯುವ ಚುನಾವಣೆಗೆ ಹಣ, ಮದ್ಯ ವಿತರಣೆ ಮತ್ತಿತರ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಮತ್ತು ಸಣ್ಣ- ಪುಟ್ಟ ಘಟನೆಗಳಿಗೂ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮತದಾನದ ದಿನದಂದು ಡಿಆರ್, ಕೆಎಸ್ಆರ್ಪಿ, ಪ್ಯಾರಾ ಮಿಲಿಟರಿ, ಸಿವಿಲ್ ಪೊಲೀಸ್, ಬಿಎಸ್ಎಫ್ ಸೇರಿದಂತೆ ಒಟ್ಟು 1,400 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಮತದಾರರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆ ಹಾಗೂ ಶೇ.100 ರಷ್ಟು ಮುಕ್ತ ಮತದಾನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಇಲಾಖೆ ವತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್ಪಿ ಆರ್. ದಿಲೀಪ್, ಹೆಚ್ಚುವರಿ ಎಸ್ಪಿ ಮೋಹನ್ರೆಡ್ಡಿ, ಡಿವೈಎಸ್ಪಿ ಮುದ್ದುಮಹದೇವಯ್ಯ ಇದ್ದರು.