ಕೃಷ್ಣರಾಜ ಕ್ಷೇತ್ರ ಶಾಸಕರ ಕಚೇರಿ ಆರಂಭ
ಕ.ಪ್ರ.ವಾರ್ತೆ ಮೈಸೂರು ಮೇ 27
ನಗರಪಾಲಿಕೆ ಕಚೇರಿಯಲ್ಲಿ ಕೃಷ್ಣರಾಜ ಶಾಸಕ ಎಂ.ಕೆ. ಸೋಮಶೇಖರ್ ಕಚೇರಿಯನ್ನು ಸಂಸದ ಎಚ್. ವಿಶ್ವನಾಥ್ ಸೋಮವಾರ ಉದ್ಘಾಟಿಸಿದರು.
ಈ ಹಿಂದೆ ಆಡಳಿತ ಪಕ್ಷದ ನಾಯಕರ ಕಚೇರಿಯಾಗಿದ್ದ ಕೊಠಡಿಯನ್ನು ಶಾಸಕ ಎಂ.ಕೆ. ಸೋಮಶೇಖರ್ ತಮ್ಮ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಕಚೇರಿಯನ್ನು ಸಂಸದ ವಿಶ್ವನಾಥ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಸೋಮಶೇಖರ್ ಅವರನ್ನು ಅಭಿನಂದಿಸಿದರು.
ಬಳಿಕ ಮಾತನಾಡಿದ ಸೋಮಶೇಖರ್, ಸಾರ್ವಜನಿಕರ ಅನುಕೂಲಕ್ಕಾಗಿ ಈ ಕಚೇರಿ ತೆರೆಯಲಾಗಿದೆ.
ಅವರ ಕುಂದುಕೊರತೆ ವಿಚಾರಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ನಗರದಲ್ಲಿ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಎಕ್ಸೆಲ್ ಪ್ಲಾಂಟ್ ಸ್ಥಳಾಂತರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಗುರುತಿಸಲಾಗಿದ್ದ ಕಡೆಗೆ ಸ್ಥಳಾಂತರಿಸಲು ತೀರ್ಮಾನಿಸಿರುವುದಾಗಿ ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಸಿ. ದಾಸೇಗೌಡ, ಪಾಲಿಕೆ ಸದಸ್ಯರಾದ ಸುನಿಲ್, ಸುನೀಲ್ ಕುಮಾರ್, ಜಗದೀಶ್, ಮಂಜುಳಾ ಮಾನಸ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎ. ವೆಂಕಟೇಶ್, ಶಿವಣ್ಣ, ಶಿವಮಲ್ಲು, ರೇವಣ್ಣ ಇದ್ದರು.