ನೀರಿಲ್ಲದೆ ನಿರ್ಮಾಣ ವಲಯ ಸಂಕಷ್ಟ
ಮಾ. ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಮೇ 27
ಜೀವರಾಶಿ ಹಾಗೂ ಸಸ್ಯಸಂಕುಲಗಳಿಗೆ ಬಹುಮುಖ್ಯವಾಗಿರುವ ಜಲಸಂಪತ್ತು ಇಂದು ಬರಿದಾಗುತ್ತಿರುವ ಹಿನ್ನೆಲೆಯಲ್ಲಿ, ನಿರ್ಜೀವವಾದ ನಿರ್ಮಾಣ ಹಂತದಲ್ಲಿನ ಕಟ್ಟಡಗಳು ಸಹ ತಲೆ ಎತ್ತಲಾಗದೆ ನಿರ್ಮಾಣ ಕ್ಷೇತ್ರವೂ ಸಹ ನೀರಿನ ಸಂಕಷ್ಟ ಅನುಭವಿಸುವಂತಾಗಿದೆ.
ಮೈಸೂರಿನ ಹೃದಯ ಭಾಗದಲ್ಲಿ ನರ್ಮ್ ಯೋಜನೆಯಡಿ ಅನೇಕ ಕಾಮಗಾರಿಗಳು ನಡೆದಿವೆ. ಇದು ಸರ್ಕಾರದ ಕೆಲಸವಾಗಿರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಕೊಳ್ಳುವುದು ಅಷ್ಟು ದುಸ್ತರವಾಗುವುದಿಲ್ಲ. ಆದರೆ ಈಗ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುವುದು ಖಾಸಗಿ ಕಟ್ಟಡ ನಿರ್ಮಾಣಕಾರರಿಗೆ ಮಾತ್ರ.
ಮನೆ ಕಟ್ಟಿ ನೋಡು ಮದುವೆ ಮಾಡು ನೋಡಿ ಎಂಬ ಗಾದೆ ಮಾತಿನಂತೆ. ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ನಿರ್ಮಾಣಕ್ಕೆ ಎಲ್ಲಾ ಕಚ್ಚಾ ವಸ್ತುವೂ ಮುಖ್ಯವೇ. ಆದರೆ ನೀರು ಬಹುಮುಖ್ಯ. ಆದ್ದರಿಂದ ಮನೆಯ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಿದ ನಂತರ ಮೊದಲ ಕೆಲಸ ನೀರಿನ ತೊಟ್ಟಿ ನಿರ್ಮಾಣ. ಆದರೆ ಇಂದು ಕೃಷ್ಣರಾಜ ಸಾಗರದಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನೀರು ಸರಬರಾಜಿನ ವ್ಯತ್ಯಯ ಉಂಟಾಗಿ ಕಾಮಗಾರಿಗಾಗಿ ಅಳವಡಿಸಿರುವ ನಲ್ಲಿಗಳಲ್ಲಿ ನೀರು ಬಾರದೆ ಖಾಲಿ ತೊಟ್ಟಿಗಳು ವಿಜೃಂಭಿಸುತ್ತಿವೆ.
ಟ್ಯಾಂಕರ್ ನೀರು ಅನಿವಾರ್ಯ: ಬಡಾವಣೆಗಳಲ್ಲಿ ಯಾರಾದರು ಮನೆ ನಿರ್ಮಿಸಲು ಆರಂಭಿಸಿದರೆ ಸಾಕು ನೀರುಗಂಟಿಗಳು ಆ ಭಾಗಕ್ಕೆ ನೀರು ಸರಬರಾಜು ಸಮರ್ಪಕವಾಗಿ ನೀಡುವುದಿಲ್ಲ. ಮಾಲೀಕರಿಂದ ದಕ್ಷಿಣೆ ಬಂದಾಗ ಅಥವಾ ಸ್ಥಳೀಯ ನಗರಪಾಲಿಕೆ ಸದಸ್ಯರು ಮಂಗಳಾರತಿ ಮಾಡಿದಾಗ ವಾಲ್ಮೆನ್ಗಳು ವಾಲ್ವ್ಗಳನ್ನು ಸಮರ್ಪಕವಾಗಿ ತಿರುಗಿಸಿ ನೀರು ಹರಿಸುವುದು ಹೊಸ ಸಂಗತಿಯೇನಲ್ಲ. ಆದರೆ ಇಂದು ನೀರಿನ ಸರಬರಾಜಿನ ಕೊರತೆ ಎದುರಾಗಿರುವಾಗ ನಿರ್ಮಾಣಕಾರರಿಗೆ ಟ್ಯಾಂಕರ್ ನೀರಿಗೆ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ.
ಇದರಿಂದಾಗಿ ಕಟ್ಟಡ ಮಾಲೀಕರು ಅಥವಾ ಗುತ್ತಿಗೆದಾರರು ಮಾತ್ರವೇ ಸಂಕಷ್ಟ ಪಡುತ್ತಿಲ್ಲ. ನಿರ್ಮಾಣ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೂ ಬವಣೆ ಪಡುವಂತಾಗಿದೆ. ದಿನವೂ ಕೂಲಿ ಮಾಡಿದರೆ ಮಾತ್ರ ಕುಟುಂಬ ನಿರ್ವಹಣೆ. ಇಂತಹ ಅನೇಕ ಕುಟುಂಬಗಳು ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ನಗರದವರು ಮಾತ್ರವಲ್ಲ. ಇಲ್ಲಿನ ಸುತ್ತಮುತ್ತ ಹಳ್ಳಿಯಿಂದ ಕೂಲಿ ಅರಸಿ ಬರುವವರು ಸಹ ಕೆಲಸ ದೊರಕದೆ ಪರಿತಪಿಸುವಂತಾಗಿದೆ.
ಮನೆ ನಿರ್ಮಿಸಲು ಆರಂಭಿಸಿ 1 ವರ್ಷವಾಗುತ್ತಿದ್ದು, ಮೊದಲು ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಹೆಚ್ಚಳದ ಬಿಸಿ, ಆ ಮೇಲೆ ಮರಳಿಗಾಗಿ ಪರದಾಟ, ಇದೀಗ ನೀರಿಗೆ ಬವಣೆ ಪಡುವಂತಾಗಿದೆ. ಯೋಜನೆ ಪ್ರಕಾರ ಕಳೆದ 3 ತಿಂಗಳ ಹಿಂದೆಯೇ ಮನೆ ನಿರ್ಮಾಣ ಕಾರ್ಯ ಪೂರ್ಣವಾಗಬೇಕಿತ್ತು. ಈ ಎಲ್ಲಾ ಕಾರಣಗಳಿಂದ ತಡವಾಗುತ್ತಲೆ ಇದೆ. ಜತೆಗೆ ಅಧಿಕ ಹಣ ಖರ್ಚಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡವರು ವಿಜನಯನಗರದಲ್ಲಿ ಮನೆ ನಿರ್ಮಾಸುತ್ತಿರುವ ಎಸ್.ಎಂ. ಕೃಷ್ಣಮೂರ್ತಿ.
ಅಮೂಲ್ಯಜಲ ಬರೀ ಜೀವಿಗಳಿಗೆ ಮಾತ್ರವಲ್ಲ ಅಥವಾ ಕೃಷಿಗೆ ಮಾತ್ರವಲ್ಲ, ನಮ್ಮ ಬದುಕಿನ ಎಲ್ಲಾ ಕಾರ್ಯಕ್ಕೂ ತುಂಬ ಅವಶ್ಯಕ. ಇದು ಉತ್ಪಾದನೆಯ ವಸ್ತುವಲ್ಲ. ಪ್ರಕೃತಿ ನೀಡಬಹುದಾದ ವರದಾನ. ಇದನ್ನು ಸಂರಕ್ಷಿಸಿ ಉಳಿಸಿ ಬಳಸಬೇಕಾದುದು ಮಾತ್ರ ನಮ್ಮೆಲ್ಲರ ಕರ್ತವ್ಯ