ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುರಸಭಾ ಸದಸ್ಯನಾದರೂ ಪೌರ ಕಾಯಕ

Rashmi Kasaragodu
Updated On : 28 May 2013, 12:04 pm

ಕ.ಪ್ರ.ವಾರ್ತೆ  ಕೆ.ಆರ್. ನಗರ  ಮೇ 27
ಚುನಾಯಿತ ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ಹಮ್ಮು, ಬಿಮ್ಮು ತೋರಿಸಿ ಘನತೆ ಕಾಪಾಡಿಕೊಳ್ಳಲು ಪೈಪೋಟಿ ನಡೆಸುವ ಇಂದಿನ ದಿನಗಳಲ್ಲಿ, ಪುರಸಭೆಯ ಸದಸ್ಯನಾಗಿ ಆಯ್ಕೆಯಾದರೂ ತನ್ನ ಮೂಲ ವೃತ್ತಿಯಾದ ಕಸಗುಡಿಸುವ ಕಾಯಕವನ್ನು ಮುಂದುವರಿಸಿಕೊಂಡು ಇತರರಿಗೆ ಮಾದರಿಯಾಗಿರುವ ಪೌರ ಕಾರ್ಮಿಕನ ಬದುಕಿದು.
ಇಲ್ಲಿನ ಪುರಸಭೆಗೆ 5ನೇ ವಾರ್ಡ್‌ನಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ 295 ಮತಗಳನ್ನು ಪಡೆದು ತನ್ನ ಪ್ರತಿಸ್ಪರ್ಧಿಯನ್ನು 93 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರೂ, ಎಂದಿನಂತೆ ನಿತ್ಯ ನಾಲ್ಕಾರು ವಿದ್ಯಾಸಂಸ್ಥೆ ಹಾಗೂ ಇತರೆ ಕಡೆಗಳಲ್ಲಿ ಕಸಗುಡಿಸುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಪೌರ ಕಾರ್ಮಿಕರ ಕಾಲೋನಿಯ ನಿವಾಸಿ ನಂಜುಂಡ ಕಾಯಕದಲ್ಲೆ ಸಂತಸ ಕಾಣುತ್ತಿದ್ದಾನೆ.
ನಿತ್ಯ ಕಸ ಗುಡಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಂಜುಂಡನ ವಾರ್ಡ್‌ಗೆ ಹೆಚ್ಚಾಗಿ ಬೇರೆ ವಾರ್ಡ್‌ನವರೆ ಅಭ್ಯರ್ಥಿಗಳಾಗಿ ನಿಂತು ಗೆದ್ದು, ನಂತರ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದರು. ಇದನ್ನು ಹತ್ತಿರದಿಂದ ಗಮನಿಸುತ್ತಿದ್ದ ಇವರು, ಚುನಾವಣೆಗೆ ನಿಂತು ಆಯ್ಕೆಯಾಗಿ ಜನಸೇವೆ ಮಾಡಬೇಕೆಂಬ ಹಂಬಲ ಬೆಳೆಸಿಕೊಂಡಿದ್ದರು.
ಕಳೆದ ಬಾರಿ ಸೋತಿದ್ದರು: ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರು, ಅಲ್ಪ ಮತಗಳ ಅಂತರದಿಂದ ಸೋತರೂ ಧೃತಿಗೆಡದೆ ಎಂದಿನಂತೆ ತನ್ನ ಕಾಯಕ ಮಾಡಿಕೊಂಡು ಜನರ ವಿಶ್ವಾಸ ಗಳಿಸಿ, ಈ ಬಾರಿಯ ಚುನಾವಣೆಯಲ್ಲಿ ಮರಳಿ ಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡು ತನ್ನ ವಾರ್ಡ್‌ನ ಜನರ ಸೇವೆ ಮಾಡಲು ಸಂಕಲ್ಪ ಮಾಡಿರುವ ಈತನ ಛಲ ಇತರರಿಗೆ ಆದರ್ಶವಾಗಿದ್ದಾರೆ.
ಈತ ಈಗಲೂ ನಿತ್ಯ ಬಳೆ, ಲಯನ್ಸ್, ಬಿ.ಎಸ್. ಮಾದಪ್ಪ ವಿದ್ಯಾಸಂಸ್ಥೆಗಳಲ್ಲಿ ಬೆಳಿಗ್ಗೆ ಮತ್ತು ಕೆಎಸ್‌ಆರ್‌ಣಟಿಸಿ ಬಸ್ ಘಟಕ, ಜಾಮಿಯಾ ಮಸೀದಿ ಮತ್ತು ಇತರೆಡೆ ಕಸ ಗುಡಿಸಿ ನಂತರ ಕೂಲಿ ಕೆಲಸಕ್ಕೆ ಹೋಗಿ ಜೀವನ ನಿರ್ವಹಣೆ ಮಾಡುತ್ತಿದ್ದಾನೆ. ವಾರ್ಡ್‌ನ ಜನರ ಪ್ರೀತಿಗೆ ಪಾತ್ರನಾಗಿದ್ದು, ಇದೇ ವೃತ್ತಿ ಮಾಡುವ ಪತ್ನಿ ಸವಿತಾ, ಮಕ್ಕಳಾದ ಶಿವಕುಮಾರ್, ಎನ್. ರಾಘವೇಂದ್ರ ಮತ್ತು ದಿವ್ಯ ಅವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾನೆ. ಅಲ್ಲದೆ, ಈತನ ತಂದೆ ದಿವಂಗತ ಭಂಡಾರಿಯವರು ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ನಿವೃತ್ತರಾಗಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಪುರಸಭೆಗೆ ಪೌರ ಕಾರ್ಮಿಕನಾದ ನಂಜುಂಡ ಪ್ರವೇಶ ಮಾಡಿರುವುದು ಸಂತಸದ ಸಂಗತಿ. ಇದರ ಜತೆಗೆ ಗೆದ್ದರೂ ಯಾವುದೇ ಅಹಂಕಾರ ತೋರಿಸದೆ ತನ್ನ ಮೂಲ ಕಾಯಕವನ್ನು ಮಾಡಿಕೊಂಡು ಜೀವನ ನಿರ್ವಹಣೆ ನಡೆಸುತ್ತಿರುವುದು ಸಮಾಜಕ್ಕೆ ಮಾದರಿ.
- ಪಿ. ವಿನಯ್, ಪುರಸಭಾ ಸದಸ್ಯ, 2ನೇ ವಾರ್ಡ್

ಪೌರ ಕಾರ್ಮಿಕನಾಗಿ ಪುರಸಭೆಗೆ ಆಯ್ಕೆಯಾಗಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಗೆದ್ದ ನಂತರವೂ ತನ್ನ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದ್ದು, ಜನಸೇವೆಯಲ್ಲಿಯೂ ಇದೇ ನಿಷ್ಠೆ ಮುಂದುವರೆಸಲಿ.
- ರಂಗಣ್ಣ, ಪೌರ ಕಾರ್ಮಿಕರ ಸಹಕಾರ ಸಂಘದ ಸದಸ್ಯ.


ಚುನಾಯಿತ ಜನಪ್ರತಿನಿಧಿಯಾಗುವುದು ಹಣ ಸಂಪಾದಿಸಲು ಮತ್ತು ಪ್ರತಿಷ್ಠೆ ತೋರಿಸಿಕೊಳ್ಳುವುದಕ್ಕಲ್ಲ. ಜನರು ತಮ್ಮ ಮೂಲಭೂತ ಸವಲತ್ತುಗಳಿಗೆ ಸ್ಪಂದಿಸಲು ಕೊಡುವ ಅವಕಾಶ. ಜನ ಸೇವೆಯೇ ಬೇರೆ, ವೃತ್ತಿಯೇ ಬೇರೆ. ಜೀವನ ನಿರ್ವಹಣೆಗೆ ಕಸ ಗುಡಿಸುವ ಕೆಲಸವನ್ನು ನಾನು ಮತ್ತು ನನ್ನ ಪತ್ನಿ ಮಾಡುತ್ತೇವೆ.
- ನಂಜುಂಡ, ಪುರಸಭಾ ಸದಸ್ಯ, 5ನೇ ವಾರ್ಡ್.

- ಕುಪ್ಪೆ ಮಹದೇವಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement