ಬ್ರಾಂಡ್ ಸೃಷ್ಟಿಸಲು ನವೀನತೆ, ನಿರ್ವಹಣೆ ಮುಖ್ಯ
ಕ.ಪ್ರ.ವಾರ್ತೆ ಮೈಸೂರು ಮೇ 27
ಈಗಿನ ಕಾಲ ಬ್ರಾಂಡ್ಮಯವಾಗಿದೆ. ಬ್ರಾಂಡ್ ಸೃಷ್ಟಿಸಲು ನವೀನತೆ ಹಾಗೂ ನಿರ್ವಹಣೆ ಮುಖ್ಯವಾಗಿದೆ. ಎಲ್ಲಾ ಕ್ಷೇತ್ರಗಳೂ ನಿರ್ವಹಣೆಯ ನಾವೀನ್ಯತೆ ಬಯಸುತ್ತಿವೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ ಹೇಳಿದರು.
ನಗರದ ಎಸ್ಜೆಸಿಇ ಕ್ಯಾಂಪಸ್ನಲ್ಲಿರುವ ಜೆಎಸ್ಎಸ್ ನಿರ್ವಹಣಾ ಅಧ್ಯಯನ ಸಂಸ್ಥೆಯು (ಜೆಎಸ್ಎಸ್ಸಿಎಂಸಿ) ಇದೇ ಮೊದಲ ಬಾರಿಗೆ ಆಯೋಜಿಸಿರುವ ನಿರ್ವಹಣೆಯಲ್ಲಿ ನಾವೀನ್ಯತೆ- ಅವಕಾಶಗಳು ಮತ್ತು ಸವಾಲುಗಳು ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೊಸ ತಲೆಮಾರಿನವರು ಯಾರೋ ರೂಪಿಸಿದ ಮಾರ್ಗದ ಹಿಂದೆ ಹೋಗುವ ಬದಲು, ತಾವೇ ಹೊಸ ಮಾರ್ಗ ಸೃಷ್ಟಿಸಿಕೊಳ್ಳಬೇಕು. ಮೈಸೂರಿನ ಮಹಾರಾಜರು ಅರಮನೆ ವೈಭೋಗದಲ್ಲಿ ಕಳೆದು ಹೋಗಬಹುದಿತ್ತು. ಆದರೆ, ಅವರು ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಿದರು. ಇದೂ ಸಹ ಭಿನ್ನ ಸಾಧನೆ. ಇದಕ್ಕೆ ಬೇಕಾಗಿರುವುದು ಪರಿಣಾಮಕಾರಿ ನಿರ್ವಹಣೆ ಮಾತ್ರ ಎಂದು ತಿಳಿಸಿದರು.
ಲಕ್ಷಗಟ್ಟಲೇ ಸಂಬಳದ ಬಗ್ಗೆ ತಲೆಕೆಡಿಸಿಕೊಂಡು ಅದರ ಹಿಂದೆ ಬೀಳುವ ಬದಲು, ಸಂಬಂಧ ಜೊತೆಗೆ ನೀವು ಏನು ಎನ್ನುವುದನ್ನು ತೋರಿಸಬೇಕು. ಇದು ಸಮಾಜಕ್ಕೂ ಸಹ ಉಪಕಾರಿ. ಇರುವ ಅವಕಾಶಗಳನ್ನೇ ಸವಾಲಾಗಿ ಸ್ವೀಕರಿಸಿ ಸಾಧಿಸಿ ತೋರಿಸಬೇಕು ಎಂದು ಸಲಹೆ ನೀಡಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ತಂತ್ರಜ್ಞಾನ ನಿರ್ದೇಶಕ ಪ್ರೊ.ಎಂ.ಎಚ್. ಧನಂಜಯ ಮಾತನಾಡಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹೊಸತನಕ್ಕೆ ಸಾಕಷ್ಟು ಅವಕಾಶಗಳಿದ್ದು, ನಿರ್ವಹಣಾ ಸಂಸ್ಥೆ ಈ ಕ್ಷೇತ್ರವನ್ನು ಆಯ್ದುಕೊಳ್ಳುವುದು ಸೂಕ್ತ ಎಂದು ಹೇಳಿದರು.
ಹೊಸ ಮಾದರಿ ಅನಿವಾರ್ಯ: ಜೆಎಸ್ಎಸ್ ಸಂಶೋಧನೆ, ನವೀನತೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ವಿ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಿನ ಪೀಳಿಗೆ ಸವಾಲುಗಳನ್ನು ಎದುರಿಸಿ ಹೊಸ ಮಾದರಿಗಳನ್ನು ರೂಪಿಸುವ ಅನಿವಾರ್ಯತೆ ಇದೆ. ಭಾರತ ಹಾಗೂ ಚೀನಾದ ನಡುವಿನ ಸ್ಪರ್ಧೆ ಇರುವುದು ಮಾರುಕಟ್ಟೆ ರೂಪಿಸಿಕೊಳ್ಳುವ ವಿಚಾರದಲ್ಲೇ. ಇದನ್ನು ಎದುರಿಸಲು ನಾವೀನ್ಯತೆ ಹಾಗೂ ನಿರ್ವಹಣೆ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಪ್ರಸ್ತುತ ಕಾರ್ಪೊರೇಟ್ ಮಟ್ಟದಲ್ಲಿ ಸ್ಪರ್ಧೆಗಳು ಪ್ರಬಲವಾಗಿವೆ. ನಾವು ಏನನ್ನೇ ಸಾಧಿಸಿದರೂ ಅದನ್ನು ದಾಖಲೀಕರಣ ಮಾಡುವ ಪ್ರವೃತ್ತಿ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ವಿದ್ಯಾರ್ಥಿಗಳು ಈ ನಿಟ್ಟಿಯಲ್ಲೂ ಯೋಚಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಐದು ವರ್ಷದ ಅವಧಿಯಲ್ಲಿನ ಉತ್ತಮ ನಿರ್ವಹಣೆ ಹಾಗೂ ಐಎಸ್ಒ 9001- 2008 ಪ್ರಮಾಣ ಪತ್ರವನ್ನು ಜೆಎಸ್ಎಸ್ ಸಿಎಂಸಿಗೆ ಅತಿ ಗಣ್ಯರು ವಿತರಿಸಿದರು. ಎರಡು ದಿನದ ವಿಚಾರ ಸಂಕಿರಣದಲ್ಲಿ ನಿರ್ವಹಣಾ ಕ್ಷೇತ್ರದ ತಜ್ಞರು ವಿಷಯ ಮಂಡಿಸುವರು.
ಬೆಂಗಳೂರು ಲಾಯ್ಡ್ ಕ್ವಾಲಿಟಿ ಅಶ್ಯೂರೆನ್ಸ್ನ ಮುಖ್ಯ ಲೆಕ್ಕ ವ್ಯವಸ್ಥಾಪಕ ವೆಂಕಟಕುಪ್ಪುಸ್ವಾಮಿ, ಎಸ್ಜೆಸಿಇ ಪ್ರಾಂಶುಪಾಲ ಡಾ.ಬಿ.ಜಿ. ಸಂಗಮೇಶ್ವರ್, ಜೆಎಸ್ಎಸ್ಸಿಎಂಸಿ ಮುಖ್ಯಸ್ಥ ಪ್ರೊ.ಜೆ.ಎಸ್. ಕಿರಣ್, ಸಹಾಯಕ ಪ್ರಾಧ್ಯಾಪಕ ಡಾ.ಪಿ.ನಾಗೇಶ್, ಡಾ. ಸವಿತಾ ಜಿ. ಲಕ್ಕಲ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ಮಿತಾಶ್ರೀ, ಪಿ.ಬಿ. ವಿಶ್ವನಾಥ್ ಇದ್ದರು.
ನಮ್ಮ ಸಚಿವರಿಗೂ ತರಬೇತಿ ಬೇಕು
ಅಮೆರಿಕ ಅಧ್ಯಕ್ಷ ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದಾಗ ಮೊದಲು ಕೆನಡಿ ಸಂಸ್ಥೆಯ ಸದಸ್ಯರಾಗಿ ನೋಂದಾಯಿಸಿಕೊಂಡು, ಆಡಳಿತದ ತರಬೇತಿ ಪಡೆದಿದ್ದರು. ಇದು ನಮ್ಮ ಸಚಿವರಿಗೂ ಮಾದರಿಯಾಗಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ ಹೇಳಿದರು. ನೂತನ ಸರ್ಕಾರದ ಸಚಿವ ಸಂಪುಟ ಈಗಷ್ಟೇ ರಚನೆಯಾಗಿದೆ. ಅಲ್ಲಿ ಕೆಲವರಿಗೆ ಖಾತೆ ಹಂಚಿಕೆ ಮಾಡಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಆರೋಗ್ಯ, ಶಿಕ್ಷಣದಂತಹ ಖಾತೆ ನೀಡುವಾಗ ಅನುಭವ ಪರಿಗಣಿಸಬೇಕು. ಯಾರು ಏನು ಬೇಕಾದರೂ ಆಗಬಹುದೆಂಬ ಮನೋಭಾವ ಬದಲಾಗಬೇಕು. ಸಾರ್ವಜನಿಕ ಆಡಳಿತ, ನಾಯಕತ್ವದಂತಹ ವಿಚಾರದಲ್ಲಿ ಈಗಿನ ಸಚಿವರಿಗೂ ಮಾರ್ಗದರ್ಶನ ಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.