ಭಗೀರಥ ಉಪ್ಪಾರ ವೇದಿಕೆಗೆ ಆಯ್ಕೆ
ಕೆ.ಆರ್. ನಗರ: ತಾಲೂಕು ಭಗೀರಥ ಉಪ್ಪಾರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾಗಿ ಕೆ.ಟಿ. ಮೋಹನ್ಕುಮಾರ್ (ಅಧ್ಯಕ್ಷರು) ಎಚ್.ಎನ್. ವಿಜಯ್ಕುಮಾರ್ (ಗೌರವಾಧ್ಯಕ್ಷರು), ಎಸ್.ಎಸ್. ಅಶೋಕ್ (ಉಪಾಧ್ಯಕ್ಷ), ಎಸ್. ಯೋಗಾನಂದ (ಪ್ರಧಾನ ಕಾರ್ಯದರ್ಶಿ), ಬಿ.ಕೆ. ನಾಗಣ್ಣ (ಸಹ ಕಾರ್ಯದರ್ಶಿ), ಮಹದೇವ್ (ಖಜಾಂಚಿ), ಟಿ.ಎನ್. ಯೋಗೇಶ್ಕುಮಾರ್ (ಸಂಚಾಲಕರು), ಎಂ. ಕುಮಾರ್ (ಸಂಘಟನಾ ಕಾರ್ಯದರ್ಶಿ), ಯಶವಂತ್ (ಕ್ರೀಡಾ ಕಾರ್ಯದರ್ಶಿ), ಸ್ವಾಮಿ (ಸಾಂಸ್ಕೃತಿಕ ಕಾರ್ಯದರ್ಶಿ), ಕೆ.ಪಿ. ತುಳಸಿಕುಮಾರ್ (ಪತ್ರಿಕಾ ಕಾರ್ಯದರ್ಶಿ) ಅವಿರೋಧ ಆಯ್ಕೆಯಾಗಿದ್ದಾರೆ.
ಹಳ್ಳಿಗಳು ಅಭಿವೃದ್ಧಿ ಆದರೆ ದೇಶ ಸಮೃದ್ಧಿ
ಕೆ.ಆರ್. ನಗರ: ಮಹಾತ್ಮ ಗಾಂಧೀಜಿಯವರ ಆಶಯದಂತೆ ಹಳ್ಳಿಗಳು ಅಭಿವೃದ್ದಿಯಾದರೆ ದೇಶ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಬಿ.ಎನ್. ವೀಣಾ ಹೇಳಿದರು.ಇಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಜತೆಗೆ ಇಂತಹ ಸಂಸ್ಥೆಗಳು ಗ್ರಾಮೀಣ ಜನರಲ್ಲಿ ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಜ್ಞಾನದ ದೀವಿಗೆಯನ್ನು ಹಚ್ಚಿ ಆರ್ಥಿಕಾಭಿವೃದ್ಧಿಗೆ ಒತ್ತು ನೀಡಿದರೆ, ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿದರು. ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ, ಯೋಜನಾಧಿಕಾರಿ ಬಿ. ಅಶೋಕ್, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಎಸ್. ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಕೆ.ಬಿ. ಸುಬ್ರಹ್ಮಣ್ಯ, ಕೆ.ಎಲ್. ಜಗದೀಶ್, ಮಹಿಳಾ ಒಕ್ಕೂಟದ ಗಾಯಿತ್ರಿಶಿವಣ್ಣ, ಶೀಲಾಚಂದ್ರಶೇಖರ್ ಇದ್ದರು.
ಸುತ್ತೂರು ಶಾಲೆಗೆ ಶೇ.100
ಸುತ್ತೂರು: ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಕರ್ನಾಟಕ ಸಂಸ್ಕೃತ ವಿವಿ ವತಿಯಿಂದ ಇತ್ತೀಚೆಗೆ ನಡೆದ ಸಂಸ್ಕೃತ ಪ್ರಥಮ ಮತ್ತು ಕಾವ್ಯ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಶೇ. 100 ರಷ್ಟು ಫಲಿತಾಂಶ ಪಡೆದಿದ್ದಾರೆ. ಪ್ರಥಮ ಪರೀಕ್ಷೆಯಲ್ಲಿ ಕುಳಿತ 50 ಮಂದಿಯಲ್ಲಿ 14 ಅತ್ಯುನ್ನತ ಶ್ರೇಣಿ, 23 ಪ್ರಥಮ, 12 ದ್ವಿತೀಯ ಹಾಗೂ ಒಬ್ಬ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಾವ್ಯ ಪರೀಕ್ಷೆಗೆ ಕುಳಿತ 39 ಮಂದಿಯಲ್ಲಿ 39 ವಿದ್ಯಾರ್ಥಿಗಳೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯ ಆಡಳಿತಾಧಿಕಾರಿ, ಗೌರವ ಸಹಾಯಕ ಆಡಳಿತಾಧಿಕಾರಿ, ಸಂಯೋಜನಾಧಿಕಾರಿಗಳು ಮತ್ತು ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.