ಶಾಲೆಗೆ ಹೋಗೋಣ ಬಾ...
ಬಿ. ಶೇಖರ್ ಗೋಪಿನಾಥಂ
ಕ.ಪ್ರ. ವಾರ್ತೆ ಮೈಸೂರು ಮೇ 27
ಇನ್ನೇನು ಶಾಲೆ ಆರಂಭವಾಗುತ್ತಿದೆ. ಬೇಸಿಗೆ ರಜೆಯಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳು ಮತ್ತೆ ಶಾಲೆಗೆ ಹೋಗಲು ಸಜ್ಜಾಗುತ್ತಿದ್ದಾರೆ.
ಈ ವರ್ಷವೂ ಶಾಲಾ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಹಬ್ಬದ ರೀತಿಯಲ್ಲಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. 2013-14ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭದ ದಿನ ಏನೇನು ಮಾಡಬೇಕೆಂಬುದರ ಬಗ್ಗೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ, ಬಿಇಒ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅಧ್ಯಾಪಕರಿಗೆ ಸುತ್ತೋಲೆ ಹೊರಡಿಸಿದೆ.
ಮೇ 30ರಂದು ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲು, ಮೇ 31ರಂದು ಶಾಲಾ ಪ್ರಾರಂಭೋತ್ಸವ ಆಚರಿಸಲು ಇಲಾಖೆ ಸೂಚಿಸಿದೆ.
ಶಾಲಾ ಆವರಣ, ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯುವ ನೀರು ಮತ್ತು ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ವ್ಯವಸ್ಥೆಗೊಳಿಸುವುದು, ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸುವುದು, ಶಾಲಾ ಆರಂಭದ ದಿನ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದು, ಎಸ್ಡಿಎಂಸಿ ಪದಾಧಿಕಾರಿಗಳು, ಸ್ಥಳೀಯ ಗಣ್ಯರು, ಸಾರ್ವಜನಿಕರು, ಪೋಷಕರ ಉಪಸ್ಥಿತಿಯಲ್ಲಿ ಶಾಲೆ ಆರಂಭಿಸಬೇಕು.
ಹೊಸಬರನ್ನು ಸ್ವಾಗತಿಸಿ: 1 ಮತ್ತು 6ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಅಹ್ಲಾದಕರವಾಗಿರುವಂತೆ ಅಧ್ಯಾಪಕರು ಮಕ್ಕಳನ್ನು ನಡೆಸಿಕೊಳ್ಳಬೇಕು. ಈ ಸಂಗತಿ ಶಾಲಾ ಅವಧಿಯ ಬೇರೆಲ್ಲಾ ದಿನಗಳಲ್ಲೂ ಪ್ರಸ್ತುತವಾದರೂ ವಿದ್ಯಾರ್ಥಿ ಶಾಲೆಗೆ ಬಂದ ದಿನ ವಿಶೇಷವಾಗಿ ಅವರನ್ನು ಅಪ್ಯಾಯಮಾನವಾದ ದಿನವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿ ತನ್ನ ವ್ಯಾಸಂಗ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡಿದಂತೆ ಆಗುತ್ತದೆ.
ಮಿಂಚಿನ ಸಂಚಾರ: ಎಲ್ಲ ಶಾಲೆಗಳು ತೆರೆಯಲ್ಪಟ್ಟಿವೆಯೇ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದಿಯೇ ಎಂಬುದನ್ನು ಮೇಲ್ವಿಚಾರಕರು ಖಚಿತಪಡಿಸಿಕೊಳ್ಳುವ ಸಲುವಾಗಿ ಮಿಂಚಿನ ಸಂಚಾರದ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೊಂದು ಕ್ಷಿಪ್ರ ಭೇಟಿ ಕಾರ್ಯಕ್ರಮವಾಗಿದ್ದು, ಮೇ 30 ರಿಂದ ಜೂ.8ರವರೆಗೆ ಮಿಂಚಿನ ಸಂಚಾರ ಜಾರಿಯಲ್ಲಿರುತ್ತದೆ.
ಇಲಾಖೆಯ ಆಡಳಿತ ಮತ್ತು ಅಭಿವೃದ್ಧಿ ಉಪ ನಿರ್ದೇಶಕರು ಜಿಲ್ಲಾ ಹಂತದಲ್ಲಿ ತಮ್ಮ ಎರಡು ಕಚೇರಿಗಳಲ್ಲಿರುವ ಮೇಲ್ವಿಚಾರಕ, ಅಧಿಕಾರಿಗಳನ್ನು ಗಮನದಲಿಟ್ಟುಕೊಂಡು ಯಾವ ಯಾವ ಸ್ಥಳಗಳಿಗೆ ಯಾವ ಅಧಿಕಾರಿಗಳು ಹೋಗಬೇಕೆಂಬುದರ ಬಗ್ಗೆ ಯೋಜನೆ ತಯಾರಿಸಿ, ಅದರಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು. ಹೀಗೆ ನಿಯೋಜಿಸಲ್ಪಟ್ಟ ಮೇಲ್ವಿಚಾರಕರು, ಅಧಿಕಾರಿಗಳು ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಹಿಮ್ಮಾಹಿತಿಯನ್ನು ಅಧ್ಯಾಪಕರಿಗೆ ನೀಡಬೇಕು. ಈ ಭೇಟಿ ಅವಧಿ ಒಂದು ಶಾಲೆಗೆ 30 ರಿಂದ 40 ನಿಮಿಷ ಇರಬೇಕು.
ಪರಿಶೀಲಿಸಬೇಕಾದದ್ದು: ಶಾಲಾ ಕೊಠಡಿಗಳು, ಆವರಣ ಸ್ವಚ್ಛವಾಗಿದೆಯೇ? ಶೌಚಾಲಯ ಮತ್ತು ಕುಡಿಯುವ ನೀರು ವ್ಯವಸ್ಥೆ, ಮಧ್ಯಾಹ್ನದ ಉಪಹಾರ ವ್ಯವಸ್ಥೆ, ಪಠ್ಯಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ ಹಂಚಲ್ಪಟ್ಟಿವೆಯೇ? ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿಯೂ ಸಮಪರ್ಕವಿದೆಯೇ? ಸೇತುಬಂಧ ಕಾರ್ಯಕ್ರಮ ನಡೆಯುತ್ತಿದೆಯೇ ಎಂಬ ಅಂಶಗಳನ್ನು ಮಿಂಚಿನ ಸಂಚಾರದ ಅಧಿಕಾರಿಗಳು ಅವಲೋಕಿಸಿ ಸೂಕ್ತ ಹಿಮ್ಮಾಹಿತಿಯನ್ನು ಅಧ್ಯಾಪಕರಿಗೆ ನೀಡಬೇಕು.
ಈ ಕಾರ್ಯವು ಮುಗಿದ ಬಳಿಕ ಕ್ರೋಢೀಕರಣ ವರದಿಯನ್ನು ಉಪ ನಿರ್ದೇಶಕರು ಜೂ.15ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯಕ್ಕೆ ಹಾಗೂ ಮೈಸೂರು ವಿಭಾಗದವರು ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಆರ್. ಉಮಾಶಂಕರ್ ಸುತ್ತೋಲೆ ಹೊರಡಿಸಿದ್ದಾರೆ.