ಸಮಾಜಕ್ಕೆ ನಾವು ನೀಡುವ ಕೊಡುಗೆ ಮುಖ್ಯ'
ಕ.ಪ್ರ.ವಾರ್ತೆ ಮೈಸೂರು ಮೇ 27
ಪ್ರತಿಯೊಬ್ಬರೂ ತಾವು ಏನು ಗಳಿಸುತ್ತೇವೆ ಎಂಬುವುದಕ್ಕಿಂತ, ಸಮಾಜಕ್ಕೆ ಪ್ರತಿಯಾಗಿ ನಿರಂತರವಾಗಿ ತಾವೇನು ನೀಡಬಲ್ಲೆವು ಎಂಬುದು ಮುಖ್ಯ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದರು.
ಅಮೆರಿಕದ ಮೆರಿಲ್ಯಾಂಡ್ನ ಜೆಎಸ್ಎಸ್ ಸ್ಪಿರಿಚುಯಲ್ ಮಿಷನ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜೆಎಸ್ಎಸ್ ಮಹಾವಿದ್ಯಾಪೀಠದ ಗ್ರಂಥಮಾಲೆಯಿಂದ ಮಕ್ಕಳಿಗಾಗಿ ಪ್ರಕಟಿಸಿರುವ ಸಚಿತ್ರ ಕಿರುಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
12ನೇ ಶತಮಾನದ ಬಸವೇಶ್ವರರ ಸಂದೇಶಗಳು ಇಂದು ಅತ್ಯಂತ ಪ್ರಸ್ತುತವಾಗಿವೆ. ಅವುಗಳನ್ನು ಆಚರಣೆಗೆ ತಂದಾಗ ಸಮಾಜ ಸುಭಿಕ್ಷೆಯಿಂದ ಇರಲು ಸಾಧ್ಯ. ಕುಟುಂಬದ ಸದಸ್ಯರೆಲ್ಲರೂ ಸದಾಕಾಲ ಸಂತೋಷದಿಂದ ಇರಬೇಕಾದ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳುವುದು ಅಗತ್ಯ. ತಾಯಿಯನ್ನು ಪೂಜ್ಯ ಭಾವನೆಯಿಂದ ಕಂಡು ಸಂತೋಷದಿಂದ ಇರುವಂತೆ ಮಾಡಿದರೆ ಮನೆಯೆಲ್ಲ ಸಂತೋಷದಿಂದ ಇರಲು ಸಾಧ್ಯ. ಹಾಗೆಯೇ ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವುದು ಹಾಗೂ ರಾಷ್ಟ್ರದ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ತಿಳಿಸಿದ ಅವರು, ಜೆಎಸ್ಎಸ್ ಮಹಾವಿದ್ಯಾಪೀಠ ಶೈಕ್ಷಣಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ನಮ್ಮ ಶ್ರೀಮಂತ ಸಂಸ್ಕೃತಿ ಅರ್ಥಮಾಡಿಕೊಂಡು, ಅದನ್ನು ಮುಂದಿನ ಜನಾಂಗಕ್ಕೂ ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಘಟಿತರಾಗಲು ಕರೆ: ಅಕ್ಕ ಅಧ್ಯಕ್ಷ ಅಮರನಾಥಗೌಡ ಮಾತನಾಡಿ, ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ನ ಬೆಳವಣಿಗೆಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅಕ್ಕ ಕಾರ್ಯಾಧ್ಯಕ್ಷ ಡಾ.ವಿಶ್ವಮಿತ್ರ ಭಾಗವಹಿಸಿದ್ದರು. ಕುಮಾರ್ ರಾಜಶೇಖರ್ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಷನ್ ಇದುವರೆಗೆ ಸಾಗಿ ಬಂದಿರುವ ಚಟುವಟಿಗಳನ್ನು, ಜೆಎಸ್ಎಸ್ ವಿವಿ ಕುಲಪತಿ ಡಾ.ಬಿ.ಸುರೇಶ್ ಜೆಎಸ್ಎಸ್ ಸಂಸ್ಥೆ ಹಾಗೂ ಮಿಷನ್ನ ಮುಂದಿನ ಧ್ಯೇಯೋದ್ದೇಶಗಳನ್ನು ಹಾಗೂ ಮಹೇಶ್ ನಾಗರಾಜಯ್ಯ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ನಾಗಶಂಕರ್ ಬಿಡುಗಡೆಯಾದ ಸಚಿತ್ರ ಕಿರುಪುಸ್ತಕಗಳ ಪರಿಚಯ ಮಾಡಿದರು.
ಮಾಂಟ್ಗೋಮರಿ ಪ್ರತಿನಿಧಿಗಳಾದ ರೆವೆರೆಂಡ್ ಮ್ಯಾನ್ಸ್ಫೀಲ್ಡ್ ಕೆನ್ಮ್ನ್ ಆಧ್ಯಾತ್ಮಿಕತೆಯ ಸಂದೇಶಗಳ ಮೂಲಕ ಸರ್ವರ ಜೀವನ ಸುಧಾರಿಸಲು ಶ್ರಮಿಸುತ್ತಿರುವ ಮಿಷನ್ನ ಕಾರ್ಯಚಟುವಟಿಕೆಗಳನ್ನು ಪ್ರಶಂಶಿಸಿದರು. ಬಾಲಕಿ ಸಾನಿಕ ಮಹಾಶೆಟ್ಟಿ ಬಸವೇಶ್ವರರ ವಚನಗಾಯನ ಮಾಡಿದರು. ದೇಶೀರೈಸ್ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಯೋಗ ಶಿಕ್ಷಕ ಸಂಚಾತ್ ಸೂಲಕುಂಟೆ ಸ್ವಾಗತಿಸಿದರು. ರಾಜೀವ್ ಮಹಾಜನ್ ವಂದಿಸಿದರು. ಜಯಶ್ರೀ ಜಗದೀಶ್ ಮತ್ತು ತ್ರಿಶೂಲ್ ನಾಗೇನಹಳ್ಳಿ ನಿರೂಪಿಸಿದರು.