ಅಭಿವೃದ್ಧಿಗೆ ಆದ್ಯತೆ ನೀಡಲು ಸಿಎಂಗೆ ಆಗ್ರಹ
ಕ.ಪ್ರ.ವಾರ್ತೆ ಮೈಸೂರು ಮೇ 28
ಮೈಸೂರಿನ ಸಮಗ್ರ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸುವಂತೆ ಭಾರತೀಯ ಕೈಗಾರಿಕೆಗಳ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ.
ಹಿಂದುಳಿದ ಪ್ರದೇಶಗಳ ಅಭಿವೃದ್ಧಿ, ಸಂಪರ್ಕ ಸಾಧಿಸುವತ್ತ ಕೇಂದ್ರಿತವಾದ ಗಮನ, ಮೈಸೂರಿಗೆ ಬಂಡವಾಳ ಆಕರ್ಷಣೆ ಮತ್ತು ಗ್ರಾಮೀಣ- ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಳು ಗಮನ ಹರಿಸುವ ಕ್ಷೇತ್ರಗಳಾಗಿವೆ. ಆದ್ದರಿಂದ ಮೈಸೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ವಿಷಯದಲ್ಲಿ ಸರ್ಕಾರಕ್ಕೆ ಸಿಐಐ ತನ್ನ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ವಿಮಾನ ನಿಲ್ದಾಣದ ವಿಸ್ತರಣೆಗೆ ಅವಕಾಶ ಮಾಡಿಕೊಡಲು ಭೂಸ್ವಾಧೀನಗಳ ವೇಗ ವರ್ಧಿಸುವುದು, ಬೆಂಗಳೂರು- ಮೈಸೂರು ಹೆದ್ದಾರಿಯ ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯ ಮಾರ್ಗ ಹುಡುಕಿ ಬೆಂಗಳೂರು- ಕನಕಪುರ- ಮಳವಳ್ಳಿ ರಸ್ತೆಯ ಚತುಷ್ಪತ ರ್ಮಾಗವನ್ನಾಗಿ ಅಭಿವೃದ್ಧಿಪಡಿಸುವುದು, ಬೆಂಗಳೂರು- ಕನಕಪುರ- ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ಮೂಲಕ ಹಾದುಹೋಗುವ ಬೆಂಗಳೂರು- ಮೆಟ್ಟುಪಾಳ್ಯಂ ರೈಲು ಮಾರ್ಗವನ್ನು ಫಾಸ್ಟ್ ಟ್ರ್ಯಾಕ್ ಮಾಡುವಂತೆ ಸಿಐಐ ನಿಯೋಗವು ಕೇಳಿಕೊಂಡಿತು.
ನಿಯೋಗದಲ್ಲಿ ಸಿಐಐ ಅಧ್ಯಕ್ಷ ಎಸ್. ನಾಗರಾಜನ್, ಉಪಾಧ್ಯಕ್ಷ ಆರ್.ಸಿ. ಜಗದೀಶ್ ಮೊದಲಾದವರು ಇದ್ದರು.