ಡೆಂಘೀ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ
ಕ.ಪ್ರ.ವಾರ್ತೆ ಹುಣಸೂರು ಮೇ 28
ಡೆಂಘೀ ಮತ್ತು ಚಿಕೂನ್ಗುನ್ಯಾ ಜ್ವರದ ಬಗ್ಗೆ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಆಡಳಿತ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ರೋಗ ನಿಯಂತ್ರಣಕ್ಕೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಜನಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ತಾ. ಆರೋಗ್ಯಾಧಿಕಾರಿ ಡಾ. ಅನಂತಸುಬ್ರಮಣ್ಯಂ ಹೇಳಿದ್ದಾರೆ.
ಡೆಂಘೀ ಜ್ವರಕ್ಕೆ ತುತ್ತಾಗಿ ಮೈಸೂರು ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಲ್ಲಿನ ಉಣ್ಣೆ ನೇಕಾರರ ಕಾಲೋನಿಯ ಅಕ್ಷಯ್ಕುಮಾರ್ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿಸಿದ್ದಾರೆ.
ಈ ಬಡಾವಣೆಯ ಮನೆ- ಮನೆಗೆ ತೆರಳಿ ಆರೋಗ್ಯ ಶಿಕ್ಷಣ ಹಾಗೂ ನೀರನ್ನು ಸಂಗ್ರಹಿಸಿಡುವ ಬಗ್ಗೆ ತಿಳಿವಳಿಕೆ ನೀಡಿ ಕರಪತ್ರ ವಿತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆಯವರಿಗೆ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದ್ದು, ಈಗಾಗಲೇ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಬಡಾವಣೆಯಲ್ಲಿ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂಗಳಲ್ಲಿ ಚುನಾಯಿತ ಪ್ರತಿನಿಧಿಗಳು, ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ನೈರ್ಮಲ್ಯ ಸಮಿತಿಗಳು ಸಭೆ ನಡೆಸಲಾಗಿದೆ. ಅಲ್ಲದೆ, ತಾಪಂ ಇಒ ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿಯೂ ಗಂಭೀರ ಚರ್ಚೆ ನಡೆದು ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ 22 ಪ್ರಾಥಮಿಕ ಆರೋಗ್ಯಕೇಂದ್ರಗಳು, ಹುಣಸೂರು ಸಾರ್ವಜನಿಕರ ಆಸ್ಪತ್ರೆಗಳ ವ್ಯಾಪ್ತಿಯ ಗ್ರಾಮದ ಎಲ್ಲ ವಾರ್ಡ್ಗಳಲ್ಲಿ ಸಭೆ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಬಹುತೇಕ ಆಸ್ಪತ್ರೆಗಳು ಹಾಗೂ ಗ್ರಾಪಂಗಳಲ್ಲಿ ಸಭೆ ನಡೆಸಿದ್ದಾರೆ. ಎಲ್ಲೆಡೆ ಕರಪತ್ರ ವಿತರಣೆ, ಶುಚಿತ್ವ, ತಿಪ್ಪೆಗುಂಡಿ, ಕಸ ವಿಲೇವಾರಿ ಮಾಡುವ ಕುರಿತು ಆರೋಗ್ಯ ಶಿಕ್ಷಣ ನೀಡಬೇಕೆಂದು ಸೂಚಿಸಲಾಗಿದೆ ಎಂದಿದ್ದಾರೆ.
ವಿವಿಧ ಗ್ರಾಪಂನಲ್ಲಿ ಸಭೆ: ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್ ನೇತೃತ್ವದಲ್ಲಿ ಧರ್ಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಪಂ ಹಾಗೂ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತರ ಸಭೆ ನಡೆದು ಎಲ್ಲ ಗ್ರಾಮಗಳಲ್ಲೂ ಡೆಂಘೀ ಜ್ವರದ ನಿಯಂತ್ರಣದ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು ಹಾಗೂ ಸ್ವಚ್ಛತೆಯಿಂದಾಗುವ ಆರೋಗ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ಡಾ. ಮುಕುಂದ, ಸದಸ್ಯರಾದ ಚಲುವರಾಜು, ಸದಾಶಿವ, ಶೇಖರ್ ಇದ್ದರು.
ಹನಗೋಡು ಗ್ರಾಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಜೋಗೇಂದ್ರನಾಥ್ ಮಾತನಾಡಿ, ಡೆಂಘೀ ಜ್ವರ ಹರಡುವ ಬಗ್ಗೆ ಮಾಹಿತಿ ನೀಡಿದರು. ಇದರ ನಿಯಂತ್ರಣಕ್ಕೆ ಸಾರ್ವಜನಿಕರು ಮತ್ತು ಗ್ರಾಪಂ ಸಹಕಾರದಿಂದ ಮಾತ್ರ ಸಾಧ್ಯ. ಪ್ರತಿ ಮನೆಯವರು ನೀರು ಶೇಖರಣೆ ಕುರಿತು ಜಾಗೃತಿ ವಹಿಸಬೇಕು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು, ಆರೋಗ್ಯ, ಅಂಗನವಾಡಿ, ಆಶಾ, ಗ್ರಾಮ ನೈರ್ಮಲ್ಯ ಸಮಿತಿಯವರು ಜಾಗೃತಿಯಿಂದ ಕೆಲಸ ಮಾಡಬೇಕೆಂದು ಆದೇಶಿಸಿದರು. ಗ್ರಾಪಂ ಅಧ್ಯಕ್ಷೆ ಮಂಜುಳಮಹೇಶ್, ಪಿಡಿಒ ಮಣಿ, ಕಾರ್ಯದರ್ಶಿ ಅವ್ವಯಮ್ಮ ಹಾಗೂ ಸದಸ್ಯರು, ಮುಖಂಡರು ಇದ್ದರು.
ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಡಾ. ಕೀರ್ತಿಕುಮಾರ್, ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೇಖರ್ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿ ಗ್ರಾಮದ ಮನೆಗಳ ಬಾಗಿಲಿಗೆ ತೆರಳಿ ಆರೋಗ್ಯ ನೈರ್ಮಲ್ಯ ಕಾಪಾಡುವ, ಸೊಳ್ಳೆ ನಿಯಂತ್ರಣ, ಚರಂಡಿ, ರಸ್ತೆ ಶುಚಿಯಾಗಿಡುವ ಕುರಿತು ಕರ ಪತ್ರ ವಿತರಿಸಿದರು. ನೀರನ್ನು ಹೆಚ್ಚು ದಿನ ಸಂಗ್ರಹಿಸಿಡಬಾರದು, ಸೊಳ್ಳೆಪರದೆ, ಸೊಳ್ಳೆಬತ್ತಿ ಬಳಸಬೇಕೆಂದು ಮನವಿ ಮಾಡಿದರು. ಆರೋಗ್ಯ ಕಾರ್ಯಕರ್ತ ಎಚ್.ಪಿ. ಹನುಮಂತ, ಕರ ವಸೂಲಿಗಾರರಾದ ಚಂದ್ರೇಗೌಡ, ಪರಮೇಶ್, ಅಂಗನವಾಡಿ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಗೋವಿಂದನಹಳ್ಳಿ ಗ್ರಾಪಂ ಅಧ್ಯಕ್ಷ ಮಹದೇವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆರೋಗ್ಯ ಸಹಾಯಕ ಲೋಕೇಶ್, ಗ್ರಾಪಂ ಕ್ಲೋರಿನೆಷನ್ ಮಾಡಿದ ನೀರನ್ನು ಪೂರೈಸಬೇಕು. ಪೈಪ್ಗಳಲ್ಲಿ ಸೋರುತ್ತಿರುವ ಕಡೆ ನಿಗಾ ವಹಿಸಬೇಕು. ಸ್ವಚ್ಛತೆಗೆ ಅದ್ಯತೆ ನೀಡಬೇಕೆಂದು ಕೋರಿದರು. ಪಿಡಿಒ ಗಿರಿಧರ್, ಆರೋಗ್ಯ ಕಾರ್ಯಕರ್ತ ಅರಳಪ್ಪ, ಸದಸ್ಯ ಶಿವಲಿಂಗ, ವಾಟರ್ ಮ್ಯಾನ್ಗಳು ಹಾಗೂ ಸದಸ್ಯರು ಇದ್ದರು.
ನೇರಳಕುಪ್ಪೆ ಗ್ರಾಪಂ ಆರೋಗ್ಯ ನೈರ್ಮಲ್ಯ ಸಮಿತಿ ಹಾಗೂ ಆರೋಗ್ಯ ಕಾರ್ಯಕರ್ತರ ಸಭೆಯಲ್ಲಿ ಗ್ರಾಪಂ ಪಿಡಿಒ ಮಣಿ ಮಾತನಾಡಿ, 13ನೇ ಹಣಕಾಸು ಯೋಜನೆ ಹಾಗೂ ಗ್ರಾಮ ನೈರ್ಮಲ್ಯ ಸಮಿತಿ ಅನುದಾನದಿಂದ ಎಲ್ಲ ಗ್ರಾಮಗಳ ಚರಂಡಿ, ರಸ್ತೆ ಶುಚಿಗೊಳಿಸಲಾಗುವುದು. ಆಯಾ ಗ್ರಾಮಗಳ ನೀರುಗಂಟಿಗಳು ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳುವ ಹಾಗೂ ಟ್ಯಾಂಕ್ ಶುಚಿಗೊಳಿಸಬೇಕು. ಈ ಬಗ್ಗೆ ಆರೋಗ್ಯ ಹಾಗೂ ಇತರೆ ಕಾರ್ಯಕರ್ತರು ವ್ಯಾಪಕ ಪ್ರಚಾರ ನಡೆಸಬೇಕೆಂದರು.
ಗ್ರಾಪಂ ಅಧ್ಯಕ್ಷೆ ಮುತ್ತಮ್ಮ, ಉಪಾಧ್ಯಕ್ಷ ಕೃಷ್ಣೇಗೌಡ, ಆರೋಗ್ಯ ಸಹಾಯಕಿಯರಾದ ಸುಧಾ, ಜಯಂತಿ, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಪಂ ಸದಸ್ಯರು ಇದ್ದರು. ತಾಲೂಕಿನ ಇತರಡೆ ಗ್ರಾಪಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯು ಸಭೆ ನಡೆಸಿ ಆರೋಗ್ಯ ಜಾಗೃತಿ ಮೂಡಿಸಿದ್ದಾರೆ.
ಇಂದು ಸಭೆ: ಡೆಂಘೀ ಪ್ರಕರಣ ವರದಿಯಾಗಿರುವ ಹಿನ್ನೆಲೆ ರೋಗ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮೇ 29ರ ಮಧ್ಯಾಹ್ನ ಆರೋಗ್ಯಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ.