ಡೆಂಘೀ ಮುನ್ನೆಚ್ಚರಿಕೆಗೆ ಮನವಿ
ಟಿ. ನರಸೀಪುರ: ಡೆಂಘೀ ಜ್ವರ ಹರಡುವುದನ್ನು ತಡೆಗಟ್ಟಲು ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸುವಂತೆ ತಾ. ಆರೋಗ್ಯಾಧಿಕಾರಿ ಡಾ.ಎಲ್. ಶ್ರೀನಿವಾಸ್ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
ತಾಪಂ ಸಾಮಾನ್ಯ ಸಭೆಯಲ್ಲಿ ತಾಲೂಕಿನಲ್ಲಿ ಡೆಂಘೀ ಜ್ವರ ಹರಡದಂತೆ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮ ವಿವರಿಸಿ ಮಾತನಾಡಿ, ಮಾರಕ ಜ್ವರ ಡೆಂಘೀ ಶಂಕಿತ ಮೂರು ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದ್ದು, ಮೂವರು ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸಮೀಕ್ಷೆ ಆರಂಭಿಸಲಾಗಿದೆ ಎಂದು ಹೇಳಿದರು.
ಡೆಂಘೀ ಜ್ವರಕ್ಕೆ ತುತ್ತಾಗುವ ಮೊದಲು ಜ್ವರ ಹರಡದಂತೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು. ನಾವು ವಾಸಿಸುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆ ಸಂತಾನೋತ್ಪತ್ತಿ ತಡೆಗಟ್ಟಬೇಕು. ಅದರ ಬಗ್ಗೆ ಮಾಹಿತಿಯ ಕರಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಎಲ್ಲ ಗ್ರಾಪಂಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ಲಿಂಕ್ ರಸ್ತೆಯಲ್ಲಿನ ಮಾಂಸ ಮಾರಾಟದ ತ್ಯಾಜ್ಯ ಬೀಸಾಡದಂತೆ ಸೂಚನೆ ನೀಡುವಂತೆ ಪಪಂ ಮುಖ್ಯಾಧಿಕಾರಿ ಸೂಚನೆ ನೀಡಲಾಯಿತು.