ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿರಿಯಾಪಟ್ಟಣ: 1.63 ಲಕ್ಷ ಮತದಾರರಿಂದ ಹಕ್ಕು ಚಲಾವಣೆ

Rashmi Kasaragodu
Updated On : 29 May 2013, 12:06 pm

ಪಿರಿಯಾಪಟ್ಟಣ: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಬೆಂಬಲಿಗರೊಡಗೂಡಿ ಪೊಲೀಸರು ಮತ್ತು ಮತಗಟ್ಟೆ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಘಟನೆ ಚೌತಿ ಗ್ರಾಮದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯು ಪದೇ ಪದೇ ಮತಗಟ್ಟೆಗೆ ಅನಗತ್ಯವಾಗಿ ಪ್ರವೇಶ ಮಾಡುತ್ತಿದ್ದ. ಇದರಿಂದ ಬೇಸತ್ತ ಅಧಿಕಾರಿಗಳು ಮತ್ತು ಪೊಲೀಸರು ಆತನನ್ನು ಹೊರ ದಬ್ಬಿದ್ದಾರೆ. ಇದರಿಂದ ಕೋಪಗೊಂಡ ಆತ ತನ್ನ ಬೆಂಬಲಿಗರೊಡಗೂಡಿ ಮತಗಟ್ಟೆಗೆ ತೆರಳಿ ಪೊಲೀಸರು ಮತ್ತು ಮತಗಟ್ಟೆ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾನೆ. ಪೊಲೀಸರು ಜೆಡಿಎಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಬಳಿಕ ಹೆಚ್ಚು ಮಂದಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ, ಯಾವುದೆ ರೀತಿಯ ರಕ್ಷಣಾ ದೋಷವಾಗಿಲ್ಲ ಎಂದು ಚುನಾವಣಾ ವಿಚಕ್ಷಣಾದಳದ ಮಂಜುನಾಥ್ ತಿಳಿಸಿದ್ದಾರೆ.
1.36 ಲಕ್ಷ ಮಂದಿ ಹಕ್ಕು ಚಲಾವಣೆ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 83.84ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ ಒಟ್ಟು 1,62,397 ಮತದಾರರಿದ್ದು ಈ ಪೈಕಿ 70,622 ಪುರುಷ ಹಾಗೂ 65,535 ಮಹಿಳಾ ಮತದಾರರು ಮತಚಲಾಯಿಸಿದ್ದು, ಒಟ್ಟು 1,36,157 ಮತದಾರರು ಮತದಾನ ಮಾಡಿದ್ದಾರೆ.
ಅಭ್ಯರ್ಥಿಗಳು ಮತ ಚಲಾಯಿಸಿದ್ದು ಎಲ್ಲಿ ಗೊತ್ತೆ?: ಇಲ್ಲಿನ ಪೇಟೆ ಶಾಲೆಯ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್, ತಾಲೂಕಿನ ಕಿತ್ತೂರು ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್, ಪಟ್ಟಣದ ಬಿ.ಎಂ. ರಸ್ತೆಯ ಬಾಲಕರ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಡಿ.ಗಣೇಶ್ ಹಾಗೂ ರಾವಂದೂರು ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಟಿ. ಸತೀಶ್ ಮತದಾನ ಮಾಡಿದರು.
ಕೈಕೊಟ್ಟ ಮತಯಂತ್ರಗಳು: ತಾಲೂಕಿನ ಮಂಚದೇವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 101ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತು. ಪಿರಿಯಾಪಟ್ಟಣದ ಮತಗಟ್ಟೆ ಸಂಖ್ಯೆ 173ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಅರ್ಧಗಂಟೆಗೂ ಹೆಚ್ಚುಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಎರಡೂ ಮತಯಂತ್ರಗಳನ್ನು ಬದಲಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು.
ಜಿಲ್ಲಾಧಿಕಾರಿ ಭೇಟಿ: ಇಲ್ಲಿನ ಉಪ್ಪಾರಗೇರಿ, ಕೋಟೆ ಶಾಲೆ ಸೇರಿದಂತೆ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮತದಾನದ ಪ್ರಕ್ರಿಯೆ ಪರಿಶೀಲಿಸಿದರು. ನಂತರ ಮಾತನಾಡಿ, ಮತಯಂತ್ರ ದೋಷದಿಂದ ತಡವಾಗಿ ಮತದಾನ ಆರಂಭವಾದ ಮತಗಟ್ಟೆಗಳಿಗೆ 30 ನಿಮಿಷ ಹೆಚ್ಚಿನ ಕಾಲಾವಕಾಶ ನೀಡಿರುವುದಾಗಿ ಹೇಳಿದರು.
ಲಘು ಲಾಠಿ ಪ್ರಹಾರ: ಇಲ್ಲಿನ ಮತಗಟ್ಟೆಯೊಂದರ ಸಮೀಪ ಕ್ಷುಲ್ಲಕ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯನ್ನು ತಪ್ಪಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯನ್ನು ಪೊಲೀಸರು ಹಾಗೂ ಬಿಎಸ್‌ಎಫ್ ಯೋಧರು ಚದುರಿಸಿ, ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಟ್ಟರು. ಪುನಾಡಹಳ್ಳಿ ಗ್ರಾಮದಲ್ಲಿ ಮತದಾನದ ಹಿಂದಿನ ದಿನ ರಾತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯನ್ನು ಪೊಲೀಸರು ನಿಯಂತ್ರಿಸಿದರಲ್ಲದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಂದಿನಾಥಪುರ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಮತಗಟ್ಟೆಯ 100 ಮೀಟರ್ ವ್ಯಪ್ತಿಯಲ್ಲಿ ಮತಯಾಚಿಸುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು, ಅದನ್ನು ತಡೆಯುವಂತೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಪೊಲೀಸರು 100 ಮೀಟರ್ ವ್ಯಾಪ್ತಿಯಲ್ಲಿದ್ದ ಎಲ್ಲರನ್ನೂ ತೆರವುಗೊಳಿಸಿದರು.
ಮತದಾನ ತಿರಸ್ಕಾರ: ತಾಲೂಕಿನ ತಿಮಕಾಪುರ ಮತಗಟ್ಟೆ ಸಂಖ್ಯೆ 180ರಲ್ಲಿ ಕಂಠಾಪುರ ನಿವಾಸಿಗಳು ಇತಿಹಾಸ ಸಂಶೋಧಕ ಅರವಿಂದ ಆರ್ಯ ಹಾಗೂ ಅವರ ಪತ್ನಿ ಜಾನಪದ ಸಂಶೋಧಕಿ ತುಳಸೀದೇವಿ ತಮ್ಮ ಮತದಾನವನ್ನು ತಿರಸ್ಕರಿಸಿದರು. ಇಲ್ಲಿನ ಚೆನ್ನಕೇಶವ ದೇವಾಲಯದ ಅಭಿವೃದ್ಧಿಯ ಬಗ್ಗೆ ಜನಪತ್ರಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಕ್ಕೆ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು. ಮಂಚದೇವನಹಳ್ಳಿ ಗ್ರಾಮದ ಮತಗಟ್ಟೆಗೆ ಸೇರಿದ ಸುಮಾರು 50ಕ್ಕೂ ಹೆಚ್ಚು ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement