ವೆಂಕಟೇಶ್ ನೇಮಕ
ಟಿ. ನರಸೀಪುರ: ತಾಲೂಕಿನ ಕಲಿಯೂರು ಗ್ರಾಮದ ಕಲಿಯೂರು ವೆಂಕಟೇಶ್ ಅವರನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಯಾಕನೂರಲ್ಲಿ ಪ್ರತಿಭಟನೆ
ಟಿ. ನರಸೀಪುರ: ಐದಾರು ದಿನಗಳಿಂದ ವಿದ್ಯುತ್ ಪೂರೈಸದ್ದನ್ನು ಖಂಡಿಸಿ, ತಾಲೂಕಿನ ಯಾಕನೂರು ಗ್ರಾಮಸ್ಥರು ಮೂಗೂರು ವಿದ್ಯುತ್ ಸರಬರಾಜು ಉಪ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕಿನ ಯಾಕನೂರು ಗ್ರಾಮದಲ್ಲಿ ಐದಾರು ದಿನಗಳಿಂದಲೂ ರಾತ್ರಿಯ ವೇಳೆಯಲ್ಲಿ ವಿದ್ಯುತ್ ಪೂರೈಸದ ಸೆಸ್ಕ್ ಅಧಿಕಾರಿಗಳ ಕರ್ತವ್ಯಲೋಪದಿಂದ ಬೇಸತ್ತು ಹೋಗಿದ್ದ ಗ್ರಾಮಸ್ಥರು, ವಿದ್ಯುತ್ ನೀಡುವಂತೆ ಮೂಗೂರಿನ ಸಬ್‌ಪವರ್ ಸ್ಟೇಷನ್‌ಗೆ ಕಳೆದ ರಾತ್ರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ರೇವಣ್ಣ, ಬಿ.ಎಂ. ಕುಮಾರ್, ಮಹದೇವಪ್ಪ, ನಾಗೇಂದ್ರ ಪ್ರಸಾದ್, ಎಸ್. ರವಿ, ಮಹೇಶ್ ಹಾಗೂ ನೂರಾರು ಮಂದಿ ಭಾಗವಹಿಸಿದ್ದರು.
ಪಾಲಿಶ್ ನೆಪದಲ್ಲಿ ವಂಚನೆ
ಟಿ. ನರಸೀಪುರ: ಪಾಲಿಶ್ ಮಾಡುವ ನೆಪದಲ್ಲಿ ಸರಗಳ್ಳರಿಬ್ಬರು ಗೃಹಿಣಿಯನ್ನು ಯಾಮಾರಿಸಿ 45 ಗ್ರಾಂನ ಚಿನ್ನದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆನಕನಹಳ್ಳಿ ಗ್ರಾಮದ ರಾಜಬುದ್ಧಿ ಎಂಬವರ ಪತ್ನಿ ಪಂಕಜ ಎಂಬವರು ಸರಗಳ್ಳರ ಮಾಡಿದ ಮೋಡಿಗೆ ಲಕ್ಷಾಂತರ ರು. ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಚಿನ್ನದ ಆಭರಣಗಳಿಗೆ ಪಾಲಿಶ್ ಮಾಡುವ ನೆಪದಲ್ಲಿ ಗ್ರಾಮಕ್ಕೆ ಬೈಕ್‌ನಲ್ಲಿ ಬಂದ ಸರಗಳ್ಳರಿಬ್ಬರು ಕೈಚಳಕ ಪ್ರದರ್ಶಿಸಿ, 45 ಗ್ರಾಂ ಆಭರಣ ದೋಚಿ ಪರಾರಿಯಾಗಿದ್ದಾರೆ. ಎದುರಿನ ಮನೆಯ ಗೃಹಿಣಿಯ ಚಿನ್ನದ ಓಲೆಗಳನ್ನು ಪಳಪಳನೆ ಹೊಳೆಯುವಂತೆ ಮೊದಲು ಪಾಲಿಶ್ ಮಾಡಿದ ಕಳ್ಳರು, ನಂತರ ಪಕ್ಕದಲ್ಲೇ ಇದ್ದ ಚಿನ್ನಬುದ್ಧಿ ಅವರ ಮನೆಗೆ ತೆರಳಿ ಅವರ ಪತ್ನಿ ಪಂಕಜ ಅವರು ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಪಾಲಿಶ್ ಮಾಡಲು ಪಡೆದುಕೊಂಡಿದ್ದಾರೆ. ಪಂಕಜ ವಸ್ತುವೊಂದನ್ನು ತರಲು ಮನೆಯೊಳಗೆ ತೆರಳಿದ ಸಂದರ್ಭವನ್ನೆ ಕಾಯುತ್ತಿದ್ದ ಕಳ್ಳರು, ಮಾಂಗಲ್ಯ ಸರದೊಂದಿಗೆ ಸ್ಥಳದಿಂದ ಕಾಲ್ಕಿತ್ತರು. ಸಬ್ ಇನ್ಸ್‌ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.