ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವ ಪೊಲೀಸರು: ಆರೋಪ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ದಿನದಂದು ಪೊಲಿಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಆರೋಪಿಸಿದರು. ಪಟ್ಟಣದ ಮತಗಟ್ಟೆಯೊಂದರ ಬಳಿ ನಡೆದ ಘರ್ಷಣೆಯ ವೇಳೆ ಇಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಜೆಡಿಎಸ್ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಹೊಡೆಯುವ ಮೂಲಕ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ತಾಲೂಕಿನ ಕಣಗಾಲು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಅಂಗನವಾಡಿ ಕಾರ್ಯಕರ್ತೆ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಇದನ್ನು ನಿಲ್ಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಮನೆಗಳಿಗೆ ನುಗ್ಗಿ ಅವರನ್ನು ಎಳೆದು ಹೊಡೆದಿದ್ದಾರೆ. ಈ ಕೂಡಲೆ ಸರ್ಕಾರ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ತಮ್ಮ ಧೋರಣೆ ಹೀಗೆ ಮುಂದುವರಿಸಿದಲ್ಲಿ ಅವರ ವಿರುದ್ಧ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಕ್ಷೇತ್ರದಲ್ಲಿ ತಮ್ಮ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಪಕ್ಷದ ವರಿಷ್ಠರಿಗೂ, ಕಾರ್ಯಕರ್ತರಿಗೂ ಮತ್ತು ಮತದಾರರಿಗೂ ಕೃತಜ್ಞತೆ ಸಲ್ಲಿಸಿದರು. ಜಿಪಂ ಸದಸ್ಯ ಎಸ್.ಎ. ಶಿವಣ್ಣ, ತಾಪಂ ಸದಸ್ಯ ಪ್ರಕಾಶ್, ಮುಖಂಡರಾದ ಕೆ.ಕೆ. ಕುಮಾರ್, ಚನ್ನಪ್ಪ, ಕಿಟ್ಟಪ್ಪ ಇದ್ದರು.