ಮತದಾರರಿಗೆ ಜೆಡಿಎಸ್ ಕೃತಜ್ಞತೆ
ಕ.ಪ್ರ. ವಾರ್ತೆ ಎಚ್.ಡಿ. ಕೋಟೆ ಮೇ 29 ಪಟ್ಟಣದ ಹುಣಸೂರು- ಬೇಗೂರು ರಸ್ತೆಯ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕಿನ ನೂತನ ಶಾಸಕ ಚಿಕ್ಕಮಾದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗು ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು ಮಾತನಾಡಿ, ನಾನು ಪರಿಷತ್ ಸದಸ್ಯನಾದ ಬಳಿಕ ತಾಲೂಕನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕಾರ್ಯದ ಜೊತೆಗೆ ಪಕ್ಷ ಸಂಘಟನೆ ಮಾಡಿ ಆ ಮೂಲಕ ತಾಲೂಕಿನಲ್ಲಿ ನಡೆದ ಜಿಪಂ, ತಾಪಂ, ಪಪಂ ಹಾಗು ಗ್ರಾಪಂ ಚುನಾವಣೆಯಲ್ಲಿ ಪಕ್ಷ ಬಲಪಡಿಸುವ ಜೊತೆಗೆ ತಾಪಂನಲ್ಲಿ ಅಧಿಕಾರ ಹಿಡಿಯಲಾಯಿತು ಎಂದರು.
ಈಗ ಚಿಕ್ಕಮಾದು ಶಾಸಕರಾಗಿದ್ದು, ಅವರು ತಾಲೂಕನ್ನು ಹಾಗೂ ಪಕ್ಷವನ್ನು ಹೇಗೆ ನಡೆಸಿಕೊಂಡು ಹೋಗುತ್ತಾರೆ ಎಂಬುವುದನ್ನು ನೋಡಬೇಕಿದೆ. ನೂತನ ಶಾಸಕರು ಬಡವರಿಗೆ ಅನುಕೂಲ ಕಲ್ಪಿಸಬೇಕು. ಅಂತೆಯೆ ತಾಲೂಕಿನ ಜನತೆಯೂ ಶಾಸಕರನ್ನು ಉತ್ತಮವಾಗಿ ಬಳಸಿಕೊಂಡರೆ ತಾಲೂಕಿನ ಅಭಿವೃದ್ಧಿ ಮಾಡಬಹುದು ಎಂದರು.
ಮಾಜಿ ಸಚಿವ ಎಂ. ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಈ ಬಾರಿಯೂ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುತಿತ್ತು. ಆದರೆ, ಕೆಲವರು ಬಂಡಾಯವಾಗಿ ಸ್ಪರ್ಧಿಸಿದ್ದರಿಂದ ಪಕ್ಷದ ಅಭ್ಯರ್ಥಿಗಳು ಸೋಲುವಂತಾಯಿತು. ಅಂತೆಯೆ ತಾಲೂಕಿನಲ್ಲಿ ಮೂವರು ಆಕಾಂಕ್ಷಿಗಳಿದ್ದಾಗಿಯೂ ಬಂಡಾಯವಾಗಿ ಸ್ಪರ್ಧೆಗೆ ಇಳಿಯದ್ದರಿಂದ ಚಿಕ್ಕಮಾದು ಗೆಲ್ಲಲು ಸಾಧ್ಯವಾಯಿತು ಎಂದರು.
ಶಾಸಕ ಚಿಕ್ಕಮಾದು ಮಾತನಾಡಿ, ತಾಲೂಕಿನಲ್ಲಿ ಎಲ್ಲರ ಶ್ರಮದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ನಿರೀಕ್ಷಿಸದ ಸ್ಥಳದಲ್ಲಿ ಮತದಾರರು ನನ್ನ ಹಣೆಬರೆಹ ಬರೆದಿದ್ದಾರೆ. ತಾಲೂಕಿನ ಜನತೆ ಕಷ್ಟ ಕಾಲದಲ್ಲಿ ನನ್ನ ಕೈಹಿಡಿದಿದ್ದಾರೆ. ನನ್ನ ಮೇಲೆ ಅನುಮಾನಪಡುವ ಅಗತ್ಯ ಇಲ್ಲ. ತಾಲೂಕಿನ ಅಭಿವೃದ್ಧಿಗಾಗಿ ಎಲ್ಲರೂ ಕೆಲಸ ಮಾಡೋಣ. ವ್ಯಕ್ತಿಗತ ನಿಂದನೆ ಬೇಡ. ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ- ಪಂಗಡದವರು ಇದ್ದು, ಅವರ ಸವರ್ಣಿಯರ ಮೇಲೆ ಗಲಾಟೆಗಳು ನಡೆದಾಗ ಎಲ್ಲರ ಜೊತೆಯಲ್ಲಿ ಕುಳಿತು ಚರ್ಚಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ, ಸರಗೂರು ಬ್ಲಾಕ್ ಅಧ್ಯಕ್ಷರಾದ ಸಿ.ವಿ. ನಾಗರಾಜು, ರವಿ, ಜಿಪಂ ಸದಸ್ಯರಾದ ಚಿಕ್ಕಣ್ಣೇಗೌಡ, ರಾಜಲಕ್ಷ್ಮೀ, ತಾಪಂ ಅಧ್ಯಕ್ಷೆ ಲಕ್ಷೀ ರಮೇಶ್, ಜಿಪಂ ಮಾಜಿ ಸದಸ್ಯರಾದ ವೆಂಕಟಸ್ವಾಮಿ, ಚಿಕ್ಕವೀರನಾಯಕ, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ತಾಪಂ ಉಪಾಧ್ಯಕ್ಷ ಮಹೇಂದ್ರ, ಹೊ.ಕೆ. ಮಹೇಂದ್ರ, ಚಾ. ನಂಜುಂಡಮೂರ್ತಿ ಇತರರು ಇದ್ದರು.