ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬ್ಯಾಂಕ್ಲ್ಲಿ ಸಿಬ್ಬಂದಿ ಕೊರತೆ: ಗ್ರಾಹಕರ ಪರದಾಟ

Rashmi Kasaragodu
Updated On : 30 May 2013, 11:56 am

ಕ.ಪ್ರ.ವಾರ್ತೆ   ಹುಣಸೂರು   ಮೇ 30
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಹನಗೋಡು ಕ್ಷೇತ್ರದ ಗ್ರಾಹಕರು ಪರದಾಡುವಂತಾಗಿದ್ದು, ಹಿರಿಯ ಅಧಿಕಾರಿಗಳು ಗಮನ ಹರಿಸದಿರುವುದು ಗ್ರಾಹಕರಲ್ಲಿ ಆಕ್ರೋಶ ಉಂಟುಮಾಡಿದೆ.
ಹುಣಸೂರು ತಾಲೂಕಿನಲ್ಲಿಯೇ ಹನಗೋಡು ಪ್ರಮುಖ ಹೋಬಳಿ ಕೇಂದ್ರವಾಗಿದೆ. ಇಲ್ಲಿ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಇಲ್ಲದಿರುವುದು ವಹಿವಾಟಿಗೆ ತೊಂದರೆಯಾಗಿದೆ. ಬ್ಯಾಂಕಿನಲ್ಲಿ ವ್ಯವಹರಿಸಲು ಖಾತೆದಾರರು ಪರದಾಡುತ್ತಿದ್ದಾರೆ. ಹನಗೋಡು ಸುತ್ತಮುತ್ತಲ 50ಕ್ಕೂ ಹೆಚ್ಚು ಹಳ್ಳಿಗೆ ಇದೊಂದೇ ಬ್ಯಾಂಕಿದ್ದು, ತಂಬಾಕು ಬೆಳೆಗಾರರು, ಇತರೆ ರೈತರು, ವ್ಯಾಪಾರಸ್ಥರು, ಮಹಿಳಾ ಸ್ವಸಹಾಯ ಸಂಘಗಳವರು, ಪಿಂಚಣಿದಾರರು, ಮಾಶಾಸನದಾರರು, ಗುತ್ತಿಗೆದಾರರು ಇಲ್ಲಿ ವ್ಯವಹರಿಸುತ್ತಿದ್ದಾರೆ.
ಬ್ಯಾಂಕಿನಲ್ಲಿ ವ್ಯವಸ್ಥಾಪಕ ಸೇರಿದಂತೆ 6 ಮಂದಿ ಸಿಬ್ಬಂದಿ ಇರಬೇಕಿದ್ದು, ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಯಾವಾಗಲೂ ಗ್ರಾಹಕರಿಂದ ಗಿಜಿಗುಡುತ್ತಿದೆ. ಹಣ ಪಡೆಯಲು, ಕಟ್ಟಲು ನೂಕುನುಗ್ಗಲು ಉಂಟಾಗುತ್ತಿದೆ.
ಹೆಚ್ಚುವರಿ ಸಿಬ್ಬಂದಿಗೆ ಆಗ್ರಹ: ಈ ಬ್ಯಾಂಕಿನಲ್ಲಿ ಹೆಚ್ಚಾಗಿ ರೈತರು ವ್ಯವಹರಿಸುತ್ತಿದ್ದು, ರೈತರ ಪಾಡು ಹೇಳತೀರದಾಗಿದೆ. ತಕ್ಷಣ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಇಲ್ಲದಿದ್ದಲ್ಲಿ ಬ್ಯಾಂಕ್ ವಿರುದ್ಧ ಪ್ರತಿಭಟಿಸುವುದಾಗಿ ಉದ್ಯಮಿ ರಾಧಕೃಷ್ಣ, ರೈತರಾದ ಮಾಲೇ ಮರಿಗೌಡ, ಮಾದೇಗೌಡ ಎಚ್ಚರಿಸಿದ್ದಾರೆ.
ನಿರೀಕ್ಷೆ: ಬ್ಯಾಂಕಿನ ಸಿಬ್ಬಂದಿ ಕೊರತೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಬ್ಯಾಂಕಿನಲ್ಲಿದ್ದ ವ್ಯವಸ್ಥಾಪಕ ಸೇರಿದಂತೆ ಇಬ್ಬರು ನೌಕರರ ವರ್ಗಾವಣೆಯಾಗಿದೆ. ಶೀಘ್ರದಲ್ಲಿ ಹೆಚ್ಚುವರಿ ಸಿಬ್ಬಂದಿ ಬರುವ ನಿರೀಕ್ಷೆ ಇದೆ ಎಂದು ಸಿಕೆಜಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎ.ಎಸ್. ರಮೇಶ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement