ಮತ ಎಣಿಕೆ ಕೇಂದ್ರದ ಸುತ್ತ ಬಂದೋಬಸ್ತ್
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 30
ಪಿರಿಯಾಪಟ್ಟಣ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶುಕ್ರವಾರ ನಡೆಯುವುದರಿಂದ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಡಿವೈಎಸ್ಪಿ ಮುದ್ದುಮಹದೇವಯ್ಯ ಹೇಳಿದರು.
ಫಲಿತಾಂಶದ ನಂತರ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ. ಎಣಿಕೆ ನಂತರ ಮುಂಜಾಗ್ರತ ಕ್ರಮವಾಗಿ ಸೆಕ್ಷನ್ 144 ಕಲಂ ವಿಧಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲಾಗುವುದು. ಶಾಂತಿ- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಕ್ಷಣಾ ಸಿಬ್ಬಂದಿಯಲ್ಲಿ ನಾಲ್ಕು ಭಾಗವಾಗಿ ವಿಂಗಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದೆ. ಭದ್ರತೆಯ ದೃಷ್ಟಿಯಿಂದ 6 ಕೆಎಸ್ಆರ್ಪಿ, 10 ಡಿಎಆರ್ ತುಕಡಿಗಳನ್ನು ನಿಯೋಜಿಸಿದ್ದು, ಎಸ್ಪಿ, ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ, 6 ಸರ್ಕಲ್ ಇನ್ಸ್ಪೆಕ್ಟರ್, 16 ಎಸ್ಐ, 300 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ವಾಹನ ಸಂಚಾರ ನಿಷೇಧ: ಮತ ಎಣಿಕೆ ಕೇಂದ್ರ ಪುಷ್ಪ ವಿದ್ಯಾಸಂಸ್ಥೆ ಗೋಣಿಕೊಪ್ಪ ರಸ್ತೆಯಲ್ಲಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದು, ಗೋಣಿಕೊಪ್ಪ ತೆರಳುವವರಿಗೆ ಸತ್ಯಗಾಲ- ತಾತನಹಳ್ಳಿ ಮಾರ್ಗವಾಗಿ ಪಂಚವಳ್ಳಿ ಮೂಲಕ ಸಂಚರಿಸುವಂತೆ ಕೋರಿದರು. ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್, ಸಬ್ ಇನ್ಸ್ಪೆಕ್ಟರ್ ಸಂತೋಷ್ ಇದ್ದರು.