ಮರಾಠಿಯಲ್ಲಿ ಪ್ರಮಾಣ: ಖಂಡನೆ
ಕ.ಪ್ರ.ವಾರ್ತೆ ಟಿ.ನರಸೀಪುರ ಮೇ 30
ರಾಜ್ಯ ವಿಧಾನಸಭೆಯಲ್ಲಿ ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬೆಳಗಾವಿ ಶಾಸಕರ ವರ್ತನೆಯನ್ನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ. ರಾಮಚಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಅಖಂಡ ಕರ್ನಾಟಕದ ಐಕ್ಯತೆ ಸಾರುವ ಕನ್ನಡನಾಡಿನ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನೆರೆಯ ರಾಜ್ಯದ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬೆಳಗಾವಿ ಶಾಸಕರು ಇಲ್ಲಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ್ ವರದಿಯಲ್ಲಿ ಹೇಳಿರುವುದರಿಂದ ಅಲ್ಲಿನ ಮರಾಠಿಗರು ಮಹಾರಾಷ್ಟ್ರಕ್ಕೆ ಸೇರಿಕೊಳ್ಳಲು ಎಂಇಎಸ್ ಮೂಲಕ ಇಂತಹ ಕುಚೋದ್ಯ ನಡೆಸುತ್ತಿದ್ದಾರೆ. ಇಂತಹ ಕುಚೋದ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಶಾಸನಸಭೆಯ ಸದಸ್ಯರಾಗಿ ಬೆಳಗಾವಿ ಶಾಸಕರು ವರ್ತಿಸಬೇಕು. ಆಂಗ್ಲ ಭಾಷೆಯಲ್ಲೂ ಕೆಲವು ಶಾಸಕರು ಪ್ರಮಾಣ ವಚನ ಸ್ವೀಕರಿಸಿರುವ ಕ್ರಮ ಸಹ ಸರಿಯಲ್ಲ ಎಂದು ರಾಮಚಂದ್ರ ಖಂಡಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಇದ್ದರು.