ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿ
ಕ.ಪ್ರ.ವಾರ್ತೆ ಟಿ. ನರಸೀಪುರ ಮೇ30
ಇಲ್ಲಿನ ಗುಂಜಾ ನರಸಿಂಹ ಸ್ವಾಮಿಯ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಹೋಮಿಯೋಪತಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಯಿತು.
ಸೌರಮಾನ ನರಸಿಂಹ ಜಯಂತಿಯ ಪ್ರಯುಕ್ತ ಸಿ.ಆರ್. ಹೋಮಿಯೋಪತಿಕ್ ರಿಸರ್ಚ್ ಫೌಂಡೇಶನ್, ವಿಕ್ಟರ್ ಹೋಮಿಯೋ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ಡಾ. ಬ್ರಹ್ಮಾಸ್ ಹೋಮಿಯೋಪತಿಕ್ ರಿಸರ್ಚ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಹೆಚ್ಚು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಗುಂಜಾ ನರಸಿಂಹ ಸ್ವಾಮಿಯ ದೇವಾಲಯದಲ್ಲಿ ಸೌರಮಾನ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವರ ದರ್ಶನಕ್ಕೆ ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಭಕ್ತರು ಬರಲಾರಂಭಿಸಿದರು. ಬೆಳಗ್ಗೆ 10ಕ್ಕೆ ಅಭಿಷೇಕ ವಿದ್ಯುಕ್ತವಾಗಿ ಆರಂಭವಾಯಿತು. ಇದೇ ವೇಳೆ ಗೋವುಗಳಿಗೆ ಉಚಿತವಾಗಿ ಮೇವು ವಿತರಿಸಲಾಯಿತು. ನಂತರ ಸಾರ್ವಜನಿಕರಿಗೆ ದಾಸೋಹವನ್ನು ಏರ್ಪಡಿಸಿತ್ತು.
ಡಾ.ಎಂ.ಆರ್. ಶ್ರೀವತ್ಸನ್ ನೇತೃತ್ವದಲ್ಲಿ ವೈದ್ಯರಾದ ಡಾ. ವೀರಬ್ರಹ್ಮಚಾರಿ, ಡಾ. ರೋಹಿತ್ ಶ್ರೀವತ್ಸನ್, ಡಾ. ಪೆರಿ ರಾಜಗೋಪಾಲ್, ಡಾ.ಎ.ಎಸ್. ನಾರಾಯಣ್, ಡಾ. ಪ್ರೇಮ್ಕಿರಣ್ ಹಾಗೂ ಡಾ.ಜೆ.ಬಿ. ಶ್ರೀನಾಥ್ ಅವರ ತಂಡ ಉಚಿತ ಹೋಮಿಯೋಪತಿ ವೈದ್ಯಕೀಯ ತಪಾಸಣೆಯಲ್ಲಿ ಭಾಗಿಯಾಗಿದ್ದರು.
ಪಪಂ ಮಾಜಿ ಅಧ್ಯಕ್ಷ ಎನ್. ಮಹದೇವಸ್ವಾಮಿ, ಮುಖಂಡರಾದ ಮಹದೇವು, ತಿಮ್ಮಣ್ಣ, ನಾಗಣ್ಣ, ಕೆ. ನಂಜುಂಡಸ್ವಾಮಿ ಇದ್ದರು.