ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಗ್ನಿಪರೀಕ್ಷೆಯಲ್ಲಿ 'ಗೆದ್ದ'ರಾಮಯ್ಯ

Rashmi Kasaragodu
Updated On : 1 Jun 2013, 12:08 pm

 ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ   ಮೈಸೂರು   ಮೇ 31
ಮುಖ್ಯಮಂತ್ರಿಯಾದ ಎರಡು ವಾರದಲ್ಲಿಯೇ ತವರು ಮೈಸೂರು ಜಿಲ್ಲೆಯಲ್ಲಿ ಎದುರಾಗಿದ್ದ ಅಗ್ನಿಪರೀಕ್ಷೆಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಯ ತನಕವಾದರೂ ಪಕ್ಷದಲ್ಲಿ ಆಂತರಿಕವಾಗಿ ಯಾವುದೇ ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಅಧಿಕಾರ ನಡೆಸುವ ಅವಕಾಶ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡರು ನಿಧನರಾಗಿದ್ದರಿಂದ ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆ ಮೂರು ವಾರಗಳ ಮಟ್ಟಿಗೆ ಮುಂದೂಡಿಕೆಯಾಗಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 224 ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್- 121 ಸ್ಥಾನ ಪಡೆಯುವ ಮೂಲಕ ಅಧಿಕಾರಕ್ಕೆ ಬಂತು. ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ. ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಸಿದ್ದರಾಮಯ್ಯ ಅವರಿಗೆ ತಮ್ಮ ಕಟ್ಟಾ ಬೆಂಬಲಿಗರೂ ಆದ ಸ್ನೇಹಿತ ಕೆ. ವೆಂಕಟೇಶ್ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮಗಿರುವ ಬೆಂಬಲ ಪ್ರದರ್ಶಿಸಬೇಕಾದ ಅನಿವಾರ್ಯತೆ ಇತ್ತು.
ಪ್ರತಿಷ್ಠೆ ಕಣ: ವಿಧಾನಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಗೆ ತಲಾ 40 ಸ್ಥಾನಗಳು ಬಂದಿದ್ದವು. ಹೀಗಾಗಿ ಮತ ಗಳಿಕೆ ಪ್ರಮಾಣದಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನಮಾನ ಪಡೆದ ಜೆಡಿಎಸ್ಗೆ ಇಲ್ಲಿ ಗೆದ್ದು, ಮುಂದೆಯೂ ಈ ಸ್ಥಾನಮಾನಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುವ ತವಕ ಇತ್ತು. ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಸ್ಥಾನ ಹೆಚ್ಚು ಕಡಿಮೆಯಾದರೂ ಬಿಜೆಪಿಗೆ ಪ್ರತಿಪಕ್ಷ ಸ್ಥಾನಮಾನ ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಪಿರಿಯಾಪಟ್ಟಣ ಫಲಿತಾಂಶವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯು 2006ರ ಡಿಸೆಂಬರ್ನಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಷ್ಟೇ ಮಹತ್ವ ಪಡೆದುಕೊಂಡಿತ್ತು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರು ಹಾಲಿ ಸಿಎಂ ಆದರೆ ಆಗ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಈಗ ಮಾಜಿ ಸಿಎಂ. ಹೀಗೆ ಇಬ್ಬರ ಪಾತ್ರಗಳು ಅದಲು ಬದಲಾಗಿದ್ದವು.
ಕಡಿಮೆ ಅಂತರದ ಸೋಲು: ಸಿದ್ದರಾಮಯ್ಯ ತಮ್ಮ ಪರಮಾಪ್ತ ಹಾಗೂ ಕಟ್ಟಾ ಬೆಂಬಲಿಗ ಮಾಜಿ ಸಚಿವ ಕೆ. ವೆಂಕಟೇಶ್ ಅವರನ್ನು ಶತಾಯಗತಾಯ ಗೆಲ್ಲಿಸುವ ಛಲದೊಂದಿಗೆ ಹೋರಾಡಿದರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಶಿವಬಸಪ್ಪ ಎಂಬ ಅನಾಮಧೇಯರನ್ನು ಅಭ್ಯರ್ಥಿಯಾಗಿಸಿ ಪರೋಕ್ಷವಾಗಿ ಸಿದ್ದರಾಮಯ್ಯ ಜೊತೆ ಸೆಣಸಾಡಿದ್ದ ಕುಮಾರಸ್ವಾಮಿ ಇಲ್ಲಿ ಪಪಂ ಮಾಜಿ ಅಧ್ಯಕ್ಷ, ಜೆಡಿಎಸ್ ತಾ. ಅಧ್ಯಕ್ಷ ಕೆ. ಮಹದೇವ್ ಅವರನ್ನು ಅಭ್ಯರ್ಥಿಯನ್ನಾಗಿಸಿ ಮತ್ತೊಮ್ಮೆ ಹೋರಾಟ ಮಾಡಿದರು. ಮಹದೇವ್ ಕಳೆದ ಬಾರಿ ಕೂಡ ಅಭ್ಯರ್ಥಿಯಾಗಿ ಕೇವಲ 879 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ 2088 ಮತಗಳ ಅಂತರದಲ್ಲಿ ಸೋತರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೇವಲ 257 ಮತಗಳ ಅಂತರದಿಂದ ಗೆದ್ದಿದ್ದರು.
ಸಿದ್ದರಾಮಯ್ಯ ವರುಣ ಕ್ಷೇತ್ರದಷ್ಟೇ ಮಹತ್ವವನ್ನು ಇಲ್ಲಿಯೂ ನೀಡಿದ್ದರು. ಕೆಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಎಚ್.ಸಿ. ಬಸವರಾಜು, ಎಸ್ಜೆಪಿ ಅಭ್ಯರ್ಥಿ ನಾರಾಯಣ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ರಾಜ್ಯ ಸಚಿವ ಸಂಪುಟದ ಡಜನ್ಗಟ್ಟಲೇ ಸಚಿವರನ್ನು ಕರೆಸಿ, ಜಾತಿವಾರು ಪ್ರಚಾರ ಮಾಡಿಸಿದ್ದರು. ಪ್ರಚಾರ ಕಾರ್ಯದಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ನಡುವೆ ಆರೋಪ- ಪ್ರತ್ಯಾರೋಪ ಜೋರಾಗಿದ್ದವು.
ಕಾಂಗ್ರೆಸ್ ಗೆಲವಿಗೆ ಕಾರಣ?: ಮೇ 5ರಂದೇ ಚುನಾವಣೆ ನಡೆದಿದ್ದರೆ ಫಲಿತಾಂಶ ಯಾವ ರೀತಿ ಇರುತ್ತಿತ್ತು ಎಂದು ಹೇಳಲಾಗದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು, ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದು, ಕೆಜೆಪಿ, ಎಸ್ಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್ಗೆ ಪೂರಕವಾಗಿ ಕೆಲಸ ಮಾಡಿ, 2088 ಮತಗಳ ಪ್ರಯಾಸದ ಗೆಲವು ತಂದುಕೊಟ್ಟಿದೆ.
1999ರಲ್ಲಿ ಗೆದ್ದಿದ್ದನ್ನು ಹೊರತುಪಡಿಸಿದರೆ ಬಿಜೆಪಿಗೆ ಇಲ್ಲಿ ಅಂಥ ನೆಲೆ ಇಲ್ಲ. ಬಿಜೆಪಿ ಪರ ಮಾಜಿ ಸಿಎಂಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಪ್ರಚಾರ ನಡೆಸಿದ್ದರು. ಆದರೂ ಆ ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement