ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 31
ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಜಯ ಗಳಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಿರಿಯಾಪಟ್ಟಣದ ವಿವಿಧೆಡೆ ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಮಳೆಯಲ್ಲೂ ವಿಜಯೋತ್ಸವ: ಫಲಿತಾಂಶ ಪ್ರಕಟಗೊಂಡ ಗಂಟೆಯ ಬಳಿಕ ಮತ ಎಣಿಕಾ ಕೇಂದ್ರಕ್ಕೆ ಬಂದ ವಿಜೇತ ಅಭ್ಯರ್ಥಿ ಕೆ. ವೆಂಕಟೇಶ್ ಚುನಾವಣಾಧಿಕಾರಿ ಎ.ಬಿ. ಬಸವರಾಜು ಅವರಿಂದ ಪ್ರಮಾಣಪತ್ರ ಪಡೆದುಕೊಂಡು ಹೊರ ಬರುತ್ತಿದ್ದಂತೆ ಮಳೆ ಆರಂಭವಾಯಿತು. ಇದರ ನಡುವೆಯೂ ಕಾರ್ಯಕರ್ತರೊಂದಿಗೆ ವಾಹನವೇರಿ ಪುಷ್ಪ ಶಾಲೆಯ ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೆ ವಿಜಯೋತ್ಸವ ಆಚರಿಸಿದರು. ನಂತರ ಮಸಣೀಕಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಆಸಕ್ತಿ ಇರಲಿಲ್ಲ: ಮತ ಎಣಿಕೆ ಕೇಂದ್ರದ ಬಳಿ ಹೆಚ್ಚಿನ ಕಾರ್ಯಕರ್ತರು ಕಾಣದೆ ಎಣಿಕಾ ಕೇಂದ್ರದ ಬಳಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಕಾರಣ ಮತ ಎಣಿಕೆ ಹಿಂದಿನ ದಿನವಾದ ಗುರುವಾರ ತಾಲೂಕಿನಾದ್ಯಂತ ಬಿದ್ದ ಬಾರಿ ಮಳೆಯಿಂದಾಗಿ ರೈತರೆಲ್ಲರೂ ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ರಾಜಕೀಯದ ಬಗ್ಗೆ ಮತ ಎಣಿಕೆ ದಿನದಂದು ಹೆಚ್ಚು ಆಸಕ್ತಿ ತೋರಲಿಲ್ಲ.
ಟಿವಿ ಮೊರೆ: ಇಲ್ಲಿನ ಬಹುತೇಕ ಅಂಗಡಿ, ಮುಂಗ್ಗಟ್ಟುಗಳು ಹಾಗೂ ಕ್ಯಾಂಟೀನ್ಗಳ ಬಳಿ ಸಾರ್ವಜನಿಕರು ಟಿವಿ ವೀಕ್ಷಣೆಯ ಮೂಲಕ ಮತ ಎಣಿಕೆಯ ಫಲಿತಾಂಶ ನೋಡುತ್ತಿದ್ದ ದೃಶ್ಯ ಕಂಡುಬಂತು.
ಮತ ಎಣಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸಿ. ಶಿಖಾ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ಆರ್. ದಿಲೀಪ್ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ತೆಯ ಬಗ್ಗೆ ಪರಿಶೀಲನೆ ನಡೆಸಿದರು.
ಸತ್ಯದ ಜಯ: ತಮ್ಮ ಗೆಲವಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ. ವೆಂಕಟೇಶ್, ಇದು ಸತ್ಯಕ್ಕೆ ಸಿಕ್ಕ ಜಯವಾಗಿದ್ದು, ಅಂತರ ಎಷ್ಟೇ ಇರಲಿ, ಗೆಲವು ಗೆಲವೇ ಎಂದರಲ್ಲದೆ, ತಮ್ಮ ಗೆಲವಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಎಲ್ಲ ಜನಪ್ರತಿನಿಧಿಗಳಿಗೂ ಪಕ್ಷದ ಕಾರ್ಯಕರ್ತರಿಗೂ ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಸಂಸದ ಎಚ್. ವಿಶ್ವನಾಥ್, ಜಿಪಂ ಸದಸ್ಯರಾದ ಮಂಜುಳಾ ರಾಜ್, ಕಾವೇರಿ ಶೇಖರ್, ಮೈಸೂರು ನಗರಪಾಲಿಕೆ ಸದಸ್ಯ ಪಿ. ಪ್ರಶಾಂತ್ಗೌಡ, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಪಪಂ ಸದಸ್ಯರಾದ ಅನಿತಾ ಶೇಖರ್, ಸಣ್ಣಪ್ಪ, ಎಪಿಎಂಸಿ ಅಧ್ಯಕ್ಷ ಹೋಲದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಪುಟ್ಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ ಚಂದ್ರು, ಪ್ರಧಾನ ಕಾರ್ಯದರ್ಶಿ ಜಯಣ್ಣ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಮುಖಂಡರಾದ ಬಿ.ಜೆ. ಬಸವರಾಜು, ಅಮೃತೇಶ್, ಎಸ್.ರಾಮು, ಪಿ.ಪಿ. ಮಹದೇವ್, ವೆಂಕಟೇಶ್ ಕುಟುಂಬದ ಸದಸ್ಯರಾದ ಭಾರತಿ ವೆಂಕಟೇಶ್, ನಿತಿನ್, ಪವನ್, ಸುಮನ್, ಡಾ. ವಿಜಯ್, ವಿಜಯ್ಕುಮಾರ್, ಅರ್ಚನಾ ನಿತಿನ್, ತೇಜಸ್ಕುಮಾರ್, ಮಾನ್ಯತಾ, ಅಚಲಾ, ದೀಪಾಂಕ್ಷಿ ಇದ್ದರು.