ಜೆಎಸ್ಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ
ಮೈಸೂರು: ನಗರದ ಸರಸ್ವತಿಪುರಂನ ಜೆಎಸ್ಎಸ್ ಪ್ರೌಢಶಾಲೆಯಲ್ಲಿ 2013- 14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಮಧ್ಯಾಹ್ನದ ಬಿಸಿಯೂಟ ವಿತರಿಸುವುದರ ಮೂಲಕ ಸ್ವಾಗತಿಸಲಾಯಿತು. ಜೆಎಸ್ಎಸ್ ಮಹಾವಿದ್ಯಾಪೀಠದ ಉಪಕಾರ್ಯದರ್ಶಿ ಶಿವಕುಮಾರಸ್ವಾಮಿ ಹಾಗೂ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ. ಶಾಂತಯ್ಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಸಿ. ರಾಜಗೋಪಾಲ್, ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ. ಶಿವಮಲ್ಲು, ಶಾಲಾ ಮುಖ್ಯೋಪಾಧ್ಯಾಯ ಕೆ.ಎಸ್. ಗೌರಿಶಂಕರಸ್ವಾಮಿ ಭಾಗವಹಿಸಿದ್ದರು. ಎ. ಕಾಂತರಾಜು ಸ್ವಾಗತಿಸಿದರು. ಕೆ.ಬಿ. ರವೀಂದ್ರ ನಿರೂಪಿಸಿದರು.
ಕ್ರಾಂತಿಕಾರಿ ಕಾರ್ಯಕ್ರಮ
ಮೈಸೂರು: ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್ ಅವರ 127ನೇ ಜನ್ಮದಿನದ ಅಂಗವಾಗಿ ರಾಷ್ಟ್ರಗೌರವ ಸಂರಕ್ಷಣ ಪರಿಷತ್ ಏರ್ಪಡಿಸಿರುವ ಮನೆಮನಗಳಿಗೆ ಕ್ರಾಂತಿಕಾರಿಗಳು ಕಾರ್ಯಕ್ರಮ ಜೂ. 1 ರಂದು ನಗರದಲ್ಲಿ ನಡೆಯಲಿದೆ.
ಅಂದು ಸಂಜೆ 6.30ಕ್ಕೆ ನಂ. 543, ಮಾರುತಿ ದೇವಾಲಯ ರಸ್ತೆ, 1ನೇ ಕ್ರಾಸ್, ಕುವೆಂಪುನಗರ, ಮೈಸೂರು ಇಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪರಿಷತ್ ಸಂಚಾಲಕ ಟಿ.ಎನ್. ರಾಮಕೃಷ್ಣ ಉಪನ್ಯಾಸ ನೀಡುವರು. ಪೂರ್ಣಿಮಾ ರವಿಶಂಕರ್ ಅಧ್ಯಕ್ಷತೆ ವಹಿಸುವರು. ದೇಶಭಕ್ತಿಯ ಸಾಹಿತ್ಯ ಪುಸ್ತಕವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 9845672560 ಸಂಪರ್ಕಿಸಬಹುದು.