ಢಣ್ ಢಣ್ ಢಣ್ ಢಣ್....
ಕ.ಪ್ರ.ವಾರ್ತೆ ಮೈಸೂರು ಮೇ 31
ಬರೋಬ್ಬರಿ 45 ದಿನಗಳ ಕಾಲ ಅಜ್ಜಿ ಮನೆಗೆ ಭೇಟಿ, ಸ್ನೇಹಿತರೊಂದಿಗೆ ಆಟೋಟದಲ್ಲಿ ತೊಡಗಿ ಆರಾಮಾಗಿದ್ದ ಮಕ್ಕಳಿಗೆ ಶುಕ್ರವಾರದಿಂದ ಶಾಲೆ ಆರಂಭವಾಗಿದೆ.
ಶುಭ್ರವಾದ ಸಮವಸ್ತ್ರ ಧರಿಸಿ, ಶಾಲಾ ವೇಳಾಪಟ್ಟಿ ಗಂಟೆ ಬಾರಿಸುವುದರೊಳಗೆ ಆವರಣದೊಳಗೆ ಹಾಜರಿದ್ದ ಮಕ್ಕಳು ಶಿಸ್ತಿನಿಂದ ನಿಂತು ಪ್ರಾರ್ಥನೆ ಮಾಡಿದರು. ನಂತರ ಶಾಲೆಯ ವಾರ್ಷಿಕ ಚಟುವಟಿಕೆಗಳ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರು. ಮೊದಲ ತರಗತಿಗೆ ಹಾಜರಾಗುತ್ತಿದ್ದಂತೆ ವಿದ್ಯಾರ್ಥಿಗಳು ಪರಸ್ಪರ ಶುಭ ಕೋರಿದರು. ಅದರಲ್ಲಂತೂ ಹೊಸದಾಗಿ ಸೇರಿಕೊಂಡವರ ಹರ್ಷ ಮೇರೆ ಮೀರಿತ್ತು.
ಶೈಕ್ಷಣಿಕ ವರ್ಷದ ಮೊದಲ ದಿನವೇ ಅನೇಕ ಮಂದಿ ಪೋಷಕರು ಮಕ್ಕಳನ್ನು ಕರೆತಂದು ಶಾಲಾ ಮೆಟ್ಟಿಲು ಹತ್ತಿಸಿ ಕೆಲವು ಹಿತವಚನ ಹೇಳಿ ಹೊರಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಂತೆ ದಿನಚರಿ ಆರಂಭವಾಯಿತು. ಅತ್ತ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಾಗುತ್ತಿತ್ತು. ಕೆಲವು ಶಾಲೆಗಳಲ್ಲಿ ಮೊದಲ ದಿನವೇ ಸ್ವಚ್ಛತೆಗಾಗಿ ಸಮಯವನ್ನು ಮೀಸಲಿಡಲಾಯಿತು.
ಇವೆಲ್ಲದರ ಜತೆಗೆ ಮತ್ತೊಂದು ವಿಶೇಷ ಎಂದರೆ ಕುವೆಂಪುನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಈ ಬಾರಿ ಸಮರ್ಪಕ ಪಠ್ಯಪುಸ್ತಕ ವಿತರಣೆಗೆ ಮುಂದಾಗಿರುವ ಶಿಕ್ಷಣ ಇಲಾಖೆ ಮೊದಲ ದಿನವೇ ಕಾರ್ಯಾರಂಭ ಮಾಡಿದೆ. ನಿಯಮದಂತೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಶಿಕ್ಷಣ ಇಲಾಖೆಯಿಂದಲೇ ಪಠ್ಯಪುಸ್ತಕ ಪಡೆಯಬೇಕಾಗುತ್ತದೆ. ಹೀಗೆ ಪಡೆದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.