ನ್ಯಾ. ಆನಂದ್ ನಾಯರ್ ವರದಿ ಜಾರಿಗೆ ಆಗ್ರಹ
ಕ.ಪ್ರ.ವಾರ್ತೆ ಮೈಸೂರು ಮೇ 31
ನ್ಯಾ. ಆನಂದ್ ನಾಯರ್ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಮಿತಿ ಆಗ್ರಹಿಸಿದೆ.
ಆನಂದ್ ನಾಯರ್ ವರದಿಯಲ್ಲಿ ನ್ಯಾಯಾಂಗ ಸೇರಿ ಎಲ್ಲಾ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ, ರಾಜಕಾರಣ, ಜಾತಿ, ಸ್ವಜನ ಪಕ್ಷಪಾತ ಇದೆ. ಇದರಿಂದಾಗಿ ದೇಶದ ಶೇ. 65 ರಷ್ಟು ಮಂದಿ ನಿರಾಪರಾಧಿಗಳು ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ತಡೆಯಲು, ಪಾವಿತ್ರ್ಯತೆ ಕಾಪಾಡಲು ನ್ಯಾಯಾಧೀಶರ ತೀರ್ಪು ಮತ್ತು ಅವರ ವೃತ್ತಿ ಪರಾಮರ್ಶೆ ಮಾಡಬೇಕು. ಇದಕ್ಕಾಗಿ ಶ್ರೇಷ್ಠ ನ್ಯಾಯಾಧೀಶರು ಹಾಗೂ ಕಾನೂನು ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಸನ್ನಡತೆ ಹಾಗೂ ಕ್ಷಮಾದಾನ ಕಾನೂನು ಜಾರಿಗೊಳಿಸಬೇಕು ಎಂದು ಸಮಿತಿ ಅಧ್ಯಕ್ಷ ಪಿ. ಕುಮಾರ್ ಮತ್ತು ಕಾರ್ಯದರ್ಶಿ ಎಸ್. ಪುನೀತ್ಕುಮಾರ್ ಒತ್ತಾಯಿಸಿದ್ದಾರೆ.