ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿಯು ಪ್ರವೇಶಕ್ಕೆ ವಿದ್ಯಾರ್ಥಿಗಳ ಹರಸಾಹಸ

Rashmi Kasaragodu
Updated On : 1 Jun 2013, 12:03 pm

ಮಾ. ವೆಂಕಟೇಶ್
ಕ.ಪ್ರ.ವಾರ್ತೆ   ಮೈಸೂರು   ಮೇ 31
ಎಸ್ಸೆಸ್ಸೆಲ್ಸಿ ಮುಗಿಸಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಪಿಯುಸಿಗೆ ಪ್ರವೇಶ ಪಡೆಯಲು ಇಲ್ಲಿನ ವಿವಿಧ ಕಾಲೇಜಗಳಲ್ಲಿ ಸೀಟಿಗಾಗಿ ಹರಸಾಹಸಪಡುವಂತಾಗಿದೆ.
ಮಹಾರಾಜ, ಮಹಾರಾಣಿ, ಮಹಾಜನ, ಮರಿಮಲ್ಲಪ್ಪ, ಸದ್ವಿದ್ಯಾ, ವಿದ್ಯಾವರ್ಧಕ, ವಿಜಯ ವಿಠಲ, ಪೀಪಲ್ಸ್ ಪಾರ್ಕ್ ಬಾಲಕಿಯರ ಕಾಲೇಜು, ಒಂಟಿಕೊಪ್ಪಲು ಸರ್ಕಾರಿ ಕಾಲೇಜು, ಮಾತೃ ಮಂಡಳಿ ಬಾಲಕಿಯರ ಕಾಲೇಜು, ಮಂಚೇಗೌಡನ ಕೊಪ್ಪಲು ಸರ್ಕಾರಿ ಕಾಲೇಜು ಹಾಗೂ ಕುವೆಂಪುನಗರ ಸರ್ಕಾರಿ ಕಾಲೇಜು ಈ ಮುಂತಾದ ಕಡೆಯಲ್ಲಿ ಪೋಷಕರು ತಮ್ಮ ಮಕ್ಕಳ ಪ್ರವೇಶಕ್ಕೆ ಮುಂದಾಗಿರುವುದನ್ನು ಕಾಣಬಹುದು.
ಆಯ್ಕೆ ಪಟ್ಟಿ ಪ್ರಕಟ: ಈಗಾಗಲೇ ಆಯಾ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳ ಹಾಗೂ ಮೀಸಲಾತಿ ಕೋಟಾದಡಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಇನ್ನು ಉಳಿದಂತೆ ಸಾಮಾನ್ಯ ಅಭ್ಯರ್ಥಿಗಳ ಆಯ್ಕೆಯ ಎರಡನೇ ಪಟ್ಟಿಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಕೆಲವರು ಒಂದಕ್ಕಿಂತ ಹೆಚ್ಚಿನ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿರುವುದು ಇಲ್ಲವೆನ್ನುವಂತಿಲ್ಲ.
ಬೇಡಿಕೆ ಹೆಚ್ಚು: ಮೈಸೂರಿನಲ್ಲಿ ಸರ್ಕಾರಿ, ಅನುದಾನಿತ ಖಾಸಗಿ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇಜುಗಳಿವೆ. ನಗರದ ವಿವಿಧ ಭಾಗಗಳ ವಿದ್ಯಾರ್ಥಿಗಳಲ್ಲದೆ, ಮೈಸೂರು ಜಿಲ್ಲೆಯ ವಿವಧ ತಾಲೂಕಿನ ವಿದ್ಯಾರ್ಥಿಗಳು ಸಹ ಇಲ್ಲಿನ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬಯಸುವ ಹಿನ್ನೆಲೆಯಲ್ಲಿ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಆಯಾ ತಾಲೂಕುಗಳಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಅಗತ್ಯ ಮೂಲ ಸೌಕರ್ಯ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ ಇರುವುದರಿಂದಾಗಿ ಮೈಸೂರು ನಗರದ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಬಯಸುತ್ತೇವೆ ಎನ್ನುತ್ತಾರೆ ಪೋಷಕ ಕೆ.ಆರ್. ನಗರದ ಪುಟ್ಟನಂಜಯ್ಯ.
ಏಷ್ಟೆಷ್ಟು ಶುಲ್ಕ?: ಪಿಯುಸಿ ಪ್ರವೇಶಕ್ಕಾಗಿ ವಿಜ್ಞಾನ ವಿಭಾಗದ ಸಾಮಾನ್ಯ ಅಭ್ಯರ್ಥಿಗಳಿಗೆ 2778, ಒಬಿಸಿಗೆ 1616 ಹಾಗೂ ಎಸ್ಸಿ ಮತ್ತು ಎಸ್ಟಿಗೆ 1236, ಕಲಾ ಮತ್ತು ವಾಣಿಜ್ಯ ವಿಭಾಗದ ಸಾಮಾನ್ಯ ವಿದ್ಯಾರ್ಥಿಗಳಿಗೆ 2038, ಒಬಿಸಿಗೆ 1368 ಹಾಗೂ ಎಸ್ಸಿ ಮತ್ತು ಎಸ್ಟಿಗೆ 986 ಶುಲ್ಕವನ್ನು ಸರ್ಕಾರ ನಿಗದಿಗೊಳಿಸಿದೆ. ಸರ್ಕಾರಿ ಕಾಲೇಜು ಹೊರತುಪಡಿಸಿ ಇತರೆ ಖಾಸಗಿ ಕಾಲೇಜುಗಳಲ್ಲಿ 10ರಿಂದ 15 ಸಾವಿರ ಶುಲ್ಕ ಪಾವತಿಸಬೇಕಿದೆ.
ವಿಳಂಬ: ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ವಿದ್ಯಾರ್ಥಿಗಳು ಸಲ್ಲಿಸಬೇಕಿದೆ. ಆದರೆ, ಇಂತಹ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿ ತಿಂಗಳಾನುಗಟ್ಟಲೆ ಕಾಯಬೇಕಿದೆ. ಇದರಿಂದಾಗಿ ನಿಗದಿತ ಶುಲ್ಕ ಪಾವತಿಸಬೇಕಿದೆ ಎಂಬುದು ಮಹಾರಾಜ ಕಾಲೇಜಿಗೆ ಪ್ರವೇಶಕ್ಕಾಗಿ ಬಂದಿದ್ದ ವಿದ್ಯಾರ್ಥಿ ನವೀನ್ ಅಳಲು.
ಸಕಾಲದಲ್ಲಿ ಜಾತಿ ಹಾಗೂ ಆದಾಯ ಪತ್ರ ದೊರಕದ ಕಾರಣ ನೇರವಾಗಿ ಶಾಲಾ ಕಾಲೇಜುಗಳ ಮೂಲಕ ಅರ್ಜಿ ಪಡೆದು ಅದನ್ನು ದೃಢೀಕರಿಸಿ ತರಿಸಿಕೊಳ್ಳುವ ಹೊಣೆಯನ್ನು ಆಯಾ ಶಿಕ್ಷಣ ಸಂಸ್ಥೆಗಳು ವಹಿಸಿಕೊಳ್ಳಬೇಕು. ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಿ ಎಂದಷ್ಟೆ ಹೇಳಲು ಮಾತ್ರ ಸರ್ಕಾರ ಮುಂದಾಗದೆ ಅಗತ್ಯ ಸೌಲಭ್ಯ ಹಾಗೂ ಸರಳವಾದ ದಾಖಲಾತಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಅನೇಕ ಪೋಷಕರ ಅಭಿಮತ.


ಜಿಲ್ಲೆಯಲ್ಲಿ 68 ಸರ್ಕಾರಿ ಕಾಲೇಜುಗಳಿವೆ. ಹೀಗಿದ್ದರೂ ವಿದ್ಯಾರ್ಥಿಗಳ ಪ್ರವೇಶಕ್ಕೆ ಒತ್ತಡವಿದೆ. ಈ ಸಂಬಂಧ ನೂತನ ಕಾಲೇಜುಗಳು ಅಗತ್ಯವಿದೆ. ಯಾವ ಭಾಗದಲ್ಲಿ ಕಾಲೇಜುಗಳ ಅಗತ್ಯವಿದೆ ಎಂಬುದನ್ನು ಸರ್ವೆ ನಡೆಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು. ವಿದ್ಯಾರ್ಥಿಗಳು ಶುಲ್ಕ ರಿಯಾಯಿತಿ ಪಡೆಯಲು ಸಲ್ಲಿಸಬೇಕಾಗಿರುವ ಆದಾಯ ಪ್ರಮಾಣ ಅಥವಾ ಜಾತಿ ಪ್ರಮಾಣ ಪತ್ರ ಪಡೆಯಲು ವಿಳಂಬವಾದರೆ ಹಳೆಯ ಪ್ರಮಾಣ ಪತ್ರದ ಆಧಾರದ ಮೇಲೆ ಪ್ರವೇಶಾತಿ ಪಡೆಯಬಹುದು. ನಂತರ ಹೊಸ ಪ್ರಮಾಣ ಪತ್ರ ಸಲ್ಲಿಸಬಹುದು. ಯಾವುದೇ ತೊಂದರೆಯಾಗದಂತೆ ಪ್ರವೇಶಕ್ಕೆ ಸೂಚಿಸಲಾಗಿದೆ.
-ಕೆ.ಎಂ. ಪುಟು, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement