ಕೇಂದ್ರದ ಮಲತಾಯಿ ಧೋರಣೆ ಸಲ್ಲದು
ಕ.ಪ್ರ.ವಾರ್ತೆ ಮೈಸೂರು ನ. 1
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಭಾಷೆಯ ಅಭಿವೃದ್ಧಿಗೆ ಕೇಂದ್ರದಿಂದ ಅಗತ್ಯ ಅನುದಾನ ಮತ್ತು ಸಹಕಾರ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟ ಮಾಡುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪುರಸಭಾ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ 58ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮಿಳು ಭಾಷೆಯ ಅಭಿವೃದ್ಧಿಗೆ ಹೆಚ್ಚು ಅನುದಾನ ಮತ್ತು ಆದ್ಯತೆ ನೀಡಿರುವ ಕೇಂದ್ರ, ಕನ್ನಡವನ್ನು ನಿರ್ಲಕ್ಷಿಸುತ್ತಿದೆ.
ಅಧಿಕಾರಕ್ಕಾಗಿ ಭಾಷಾ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ಕನ್ನಡ ಭಾಷೆ ಮತ್ತು ಶಾಲೆಯ ಏಳಿಗೆಗೆ ದುಡಿಯಬೇಕಾದ ಸರ್ಕಾರಗಳು ಇತ್ತೀಚೆಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರ ಮೈಸೂರು ನಗರದ ಎನ್ಟಿಎಂ ಸರ್ಕಾರಿ ಕನ್ನಡ ಶಾಲೆಯನ್ನು ಚೆನ್ನೈ ಮೂಲದ ರಾಮಕೃಷ್ಣ ಆಶ್ರಮಕ್ಕೆ ಕೊಟ್ಟಿದೆ. ಇಂತಹ ಪ್ರವೃತ್ತಿಗೆ ಈಗಿನ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ತಕ್ಕ ಉತ್ತರ ನೀಡಲು ಕನ್ನಡ ಭಾಷೆಯ ಏಳಿಗೆಗೆ ಸರ್ಕಾರ ಕನ್ನಡಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಭಾಷಾಭಿಮಾನಿಗಳನ್ನು ಒಗ್ಗೂಡಿಸಿ ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಭುವನೇಶ್ವರಿ ಭಾವಚಿತ್ರವನ್ನು ಅಂಬೇಡ್ಕರ್ ಪ್ರತಿಮೆಯ ಮೂಲಕ ವಿವಿ ರಸ್ತೆ, ಸಿ.ಎಂ. ರಸ್ತೆಯಲ್ಲಿ ಮೆರವಣಿಗೆ ನಡೆಸಿ ಬಯಲು ರಂಗಮಂದಿರಕ್ಕೆ ತರಲಾಯಿತು. ಈ ವೇಳೆ ನಗರದ ನಾಗರಿಕರು ಸಂಘ ಸಂಸ್ಥೆಗಳ ಮುಖಂಡರು ರಸ್ತೆಗಳಲ್ಲಿ ರಂಗೋಲಿ ಬಿಡಿಸಿ ಮೆರವಣಿಗೆಗೆ ಸ್ವಾಗತ ಕೋರಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಸಹಾಯಕ ಕೃಷಿ ನಿರ್ದೇಶಕ ಡಾ.ಸೋಮಶೇಖರ್, ಪೇದೆ ರಮೇಶ್, ಕಂದಾಯ ಇಲಾಖೆ ರಾಂಪ್ರಸಾದ್, ವಿದ್ಯಾರ್ಥಿನಿ ಲಿಖಿತ, ಕಡಲೆಕಾಯಿ ಮಾರಾಟಗಾರ ರಾಮು ಅವರನ್ನು ನಾಡಹಬ್ಬಗಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ತಹಸೀಲ್ದಾರ್ ಬಿ.ಎನ್. ವೀಣಾ ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಟಿ.ಕೆ. ಚಿನ್ನಸ್ವಾಮಿ, ಜಿಪಂ ಸದಸ್ಯ ಸಿ.ಜೆ. ದ್ವಾರಕೀಶ್, ತಾಪಂ ಸದಸ್ಯ ನಾಗಣ್ಣ, ಶಶಿಕಲಾ ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯದುಗಿರೀಶ್, ಕಸಾಪ ಅಧ್ಯಕ್ಷ ಜಿ.ಕೆ. ರಾಜು, ಇಒ ಕೆ.ಬಸವರಾಜು, ಮುಖ್ಯಾಧಿಕಾರಿ ನಾಗಶೆಟ್ಟಿ, ಆರೋಗ್ಯಾಧಿಕಾರಿ ಡಾ.ಟಿ. ಶಿವಪ್ರಸಾದ್ ಇದ್ದರು.