ಮೈಸೂರು ಗಡಿಯಲ್ಲಿ ಸರ್ವವೂ ಮಲೆಯಾಳಂಮಯ!
ಕ.ಪ್ರ.ವಾರ್ತೆ ಮೈಸೂರು ನ. 1
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೇರಳದ ಗಡಿಗೆ ಹೊಂದಿಕೊಂಡಂತಿದೆ.
ಎಚ್.ಡಿ. ಕೋಟೆ ತಾಲೂಕಿನ ಗೋಳೂರು, ಮಚ್ಚೂರು, ಆನೇಮಾಳ, ಡಿ.ಬಿ. ಕುಪ್ಪೆ, ಸಿ.ಬಿ. ಕುಪ್ಪೆ, ತಿಮ್ಮನ ಹೊಸಹಳ್ಳಿ, ವಡಕನಮಾಳ, ಕಡೇಗದ್ದೆ, ಬಾವಲಿ, ಚಿನ್ನಗುಂಡಿ, ಕುರ್ಣೇಗಾಲ, ಮೊಳೆಯೂರು, ಕಟ್ಟೇಪುರ, ಕಲ್ಕೆರೆ ಮತ್ತು ಆಲನಹಳ್ಳಿ- ಇವು ಕೇರಳದ ಗಡಿಯಲ್ಲಿ ಬರುವ ರಾಜ್ಯದ ಗ್ರಾಮಗಳು. ಸಾಮಾನ್ಯವಾಗಿ ಈ ಗ್ರಾಮಗಳು ಕೇರಳದ ಗಡಿಯಿಂದ ಅರ್ಧ ಕಿ.ಮೀ.ಯಿಂದ 23 ಕಿ.ಮೀ.ವರೆಗೆ ಇವೆ.
ಮರಕಡುವು, ಕಬ್ಬಿಣಗದ್ದೆ, ಬಾರುಲಿಗೆಲದು, ಪೆರಕಲ್, ಮೂರೇಹುರೀರು, ಪಾದ್ರಿ, ಬೀಜತೋರು, ಬೀರಡಿ, ಚೇಗೆಹಾಂಡಿ(ಹೈರವಾಡಿ)- ಇವು ಗಡಿಯಲ್ಲಿ ಬರುವ ಕೇರಳ ರಾಜ್ಯದ ಗ್ರಾಮಗಳು. ಗಡಿ ಭಾಗವಾಗಿರುವುದರಿಂದ ಹಾಗೂ ವ್ಯಾಪಾರ- ವಹಿವಾಟು ಕೇರಳದೊಂದಿಗೆ ಹೆಚ್ಚಿರುವುದರಿಂದ ಇಲ್ಲೆಲ್ಲಾ ಮಲೆಯಾಳಂಮಯ. ಉದ್ಬೂರು ಹಾಡಿಯಿಂದಲೇ ಕೇರಳದ ವಾತಾವರಣ ಕಂಡು ಬರುತ್ತದೆ. ಸರ್ಕಾರಿ ಕಚೇರಿಗಳ ನಾಮಫಲಕಗಳು ಮಲೆಯಾಳಂನಲ್ಲಿ ಇಲ್ಲ ಎಂಬುದಷ್ಟೇ ಸಮಾಧಾನ. ಉಳಿದಂತೆ ಹೊಟೇಲ್ ಸೇರಿದಂತೆ ಎಲ್ಲಾ ವಾಣಿಜ್ಯ ಕೇಂದ್ರಗಳ ನಾಮಫಲಕಗಳೂ ಮಲೆಯಾಳಂನಲ್ಲಿವೆ. ಸ್ಥಳೀಯರಿಗೂ ಮಲೆಯಾಳಂ ಗೊತ್ತು. ಹೀಗಾಗಿ ಸರ್ವ ಮಲೆಯಾಳಂ ಮಯಂ.
ಶಾಲೆಗಳಲ್ಲೂ ಭಾಷಾ ಸಮಸ್ಯೆ. ಎಚ್.ಡಿ. ಕೋಟೆ, ಅಂತರಸಂತೆ ಮೊದಲಾದ ಕಡೆಗಳಿಂದ ಸೂಕ್ತ ಸಾರಿಗೆ ಸೌಲಭ್ಯ ಇಲ್ಲದಿರುವುದರಿಂದ ಶಾಲೆಗಳಿಗೆ ವಿದ್ಯಾರ್ಥಿಗಳಿರಲಿ, ಆಗಾಗ ಮೇಷ್ಟ್ರುಗಳೇ ಚಕ್ಕರ್. ಬಂದರೂ ವಿಳಂಬವಾಗಿ ಬಂದು, ಬಹುಬೇಗ ಹೊರಟು ಬಿಡುತ್ತಾರೆ. ಇಲ್ಲದಿದ್ದಲ್ಲಿ ಅವರಿಗೆ ಸಾರಿಗೆ ಸೌಲಭ್ಯ ಸಿಗುವುದಿಲ್ಲ. ಕಾಡಿನಲ್ಲಿ ಉಳಿದರೂ ತಿನ್ನಲು ಏನೂ ಸಿಗುವುದಿಲ್ಲ. ಗಡಿ ಭಾಗ ನಿರ್ಬಂಧಿತ ಅರಣ್ಯವಾಗಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಇದರಿಂದ ಏಳು ಶಾಲೆಗಳಿಗೆ ಕಟ್ಟಡಗಳೇ ಇಲ್ಲ. ಗುಡಿಸಿಲುಗಳಲ್ಲಿ ನಡೆಸಲಾಗುತ್ತಿದೆ.
ನಿಂತು ಹೋದ ಗಡಿನಾಡೋತ್ಸವ: ಎಚ್.ಡಿ. ಕೋಟೆ ಗಡಿ ಭಾಗದಲ್ಲಿ ಆಗುತ್ತಿರುವ ಕೇರಳದ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಗಡಿನಾಡ ಉತ್ಸವ ನಡೆಸಿ, ಕನ್ನಡದ ಕಂಪನ್ನು ಬೀರಲು ಯತ್ನಿಸಿದವು. ಆದರೆ ಅದು ಸ್ಥಗಿತಗೊಂಡಿದ್ದರಿಂದ ಗಡಿಯಲ್ಲಿ ಎಲ್ಲೆಡೆ ಮಲೆಯಾಳಿ ಸಂಸ್ಕೃತಿ ಎದ್ದು ಕಾಣುತ್ತದೆ. ಜನರು ಬಟ್ಟೆ-ಬರೆಗಳಿಂದ ಹಿಡಿದು, ಆಚಾರ- ವಿಚಾರ, ವ್ಯವಸಾಯದಲ್ಲೂ ಕೇರಳ ಸಂಸ್ಕೃತಿ ಕಾಣಿಸುತ್ತದೆ. ಓಣಂ, ಕ್ರಿಸ್ಮಸ್ ಆಚರಿಸುವ ಈ ಜನ ಇತರೆ ಹಬ್ಬಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.
ಮೈಸೂರು- ಮಾನಂದವಾಡಿ ಒಂದು ರೀತಿಯಲ್ಲಿ ಕಳ್ಳ ಸಾಗಾಣಿಕೆಯ ಹೆದ್ದಾರಿ ಎನಿಸಿದೆ. ಇದು ಕೂಡ ಕನ್ನಡ ಭಾಷೆಯ ಮೇಲೆ ಗದಾಪ್ರಹಾರಕ್ಕೆ ಕಾರಣ. ಏಕೆಂದರೆ ಈ ಹೆದ್ದಾರಿಯ ಮಾರ್ಗವಾಗಿಯೇ ರಾಜ್ಯದ ಜಾನುವಾರುಗಳು, ಮರಳು, ಸಾಗುವಾನಿ ಮರಗಳು, ಅಕ್ಕಿ, ಬತ್ತ, ಮದ್ಯ ಮೊದಲಾದವು ಕಳ್ಳ ಸಾಗಾಣೆಯಾಗುತ್ತವೆ. ಕಾಡು ಮತ್ತು ಕಾಡು ಪ್ರಾಣಿಗಳ ರಕ್ಷಣೆಗಾಗಿ ರಾತ್ರಿ ವೇಳೆ ಸಂಚಾರ ನಿಷೇಧಿಸಲಾಗಿದ್ದರೂ ಕಳ್ಳ ಸಾಗಾಣಿಕೆಯಂತೂ ನಿಂತಿಲ್ಲ.
ಕೇರಳದಲ್ಲಿ ಮದ್ಯ ಮಾರಾಟ ನಿಷೇಧ ಇರುವುದರಿಂದ ಕೇರಳದ ಕುಡುಕರಿಗೆ ಕರ್ನಾಟಕದ ಮೇಲೆ ಎಲ್ಲಿಲ್ಲದ ಪ್ರೀತಿ. ರಾಜ್ಯದ ಗಡಿ ಭಾಗಗಳಿಂದ ಮದ್ಯವನ್ನು ಕೇರಳಕ್ಕೆ ಸಾಗಿಸಲಾಗುತ್ತದೆ. ಕಳ್ಳಭಟ್ಟಿ ತಯಾರಿಕೆಯೂ ಉಂಟು. ಇವರೆಲ್ಲರ ವ್ಯವಹಾರಿಕ ಭಾಷೆ ಮಲೆಯಾಳಂ. ಗಡಿ ಅಭಿವೃದ್ಧಿ ಅನುದಾನದಿಂದ ಕೆಲವೊಂದು ಮೂಲ ಸೌಕರ್ಯ ಕಲ್ಪಿಸಲಾಗಿದ್ದರೂ ಇನ್ನೂ ಹಲವಾರು ಸಮಸ್ಯೆಗಳಿವೆ
ಅಂಶಿ ಪ್ರಸನ್ನಕುಮಾರ್