ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕ.ಪ್ರ.ವಾರ್ತೆ ಮೈಸೂರು ನ. 1
ಸಮಾಜದ ವಿವಿಧ ಕ್ಷೇತ್ರಗಳ ಎಂಟು ಮಂದಿ ಗಣ್ಯ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಶುಕ್ರವಾರ ಗೌರವಿಸಲಾಯಿತು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಸೇವೆಗಾಗಿ ಎಂ. ಮೋಹನ್ಕುಮಾರ್ ಗೌಡ, ಸಾಹಿತ್ಯ ಸೇವೆಗೆ ಡಾ.ಕೆ. ಲೀಲಾ ಪ್ರಕಾಶ್, ಕ್ರೀಡೆಯಲ್ಲಿ ಪೈ. ಟೈಗರ್ ಬಾಲಾಜಿ, ವೈದ್ಯಕೀಯ ಸೇವೆಗೆ ಡಾ.ಭಾಸ್ಕರ್, ಸಮಾಜ ಸೇವೆಗೆ ವಿ.ಎನ್. ಸೋಮಶೇಖರಗೌಡ, ಜನಪದ ಸೇವೆಗೆ ಜಿ, ಗುರುರಾಜ, ವಿಜ್ಞಾನ ಸೇವೆಗೆ ಡಾ.ಟಿ. ಅನಂತ ಪದ್ಮನಾಭ ಹಾಗೂ ಪ್ರತಿಕೋದ್ಯಮ ಸೇವೆಗಾಗಿ ಡಿ. ಮಹಾದೇವಪ್ಪ ಅವರನ್ನು ಸನ್ಮಾನಿಸಲಾಯಿತು.
ರಂಗಕರ್ಮಿ ಡಾ.ನ. ರತ್ನ ಹಾಗೂ ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಅವರು ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದರಿಂದ ಅವರು ಬೆಂಗಳೂರಿಗೆ ತೆರಳಿದ್ದ ಕಾರಣ ಬಂದಿರಲಿಲ್ಲ. ಡಾ. ವಸಂತಕುಮಾರ್ ತಿಮಕಾಪುರ ಅವರ ಬದಲು ಅವರ ಪುತ್ರಿ ಪ್ರಶಸ್ತಿ ಸ್ವೀಕರಿಸಿದರು.
ಮುಖ್ಯ ಭಾಷಣಕಾರರಾಗಿದ್ದ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ, ಕನ್ನಡ ಭಾಷೆಯ ಮಹತ್ವ, ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆ ಹಾಗೂ ಜನಪದರ ಹಾಗೂ ಸಾಹಿತಿಗಳ ಕೊಡುಗೆ ಕುರಿತಾಗಿ ಮಾತನಾಡಿದರು.
ಮೇಯರ್ ಎನ್.ಎಂ. ರಾಜೇಶ್ವರಿ ಮುಖ್ಯ ಅತಿಥಿಯಾಗಿದ್ದರು. ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಬಸವರಾಜು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುನಿತಾ ಚಂದ್ರಶೇಖರ್ ತಂಡದವರು ಕನ್ನಡ ಗೀತೆಗಳನ್ನೂ, ವಿಜಯಮೂರ್ತಿ ತಂಡದವರು ನೃತ್ಯ ಪ್ರದರ್ಶನವನ್ನೂ, ನೆಹರು ಯುವಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದವರು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಡು, ನೃತ್ಯ ಹಾಗೂ ಸಂಗೀತ ವೈವಿಧ್ಯ ನಡೆಸಿಕೊಟ್ಟರು.