ಕಾರ್ಮಿಕರಲ್ಲಿ ಕಾನೂನು ತಿಳಿವಳಿಕೆ ಕಡಿಮೆ: ನ್ಯಾ. ಅಶ್ವತ್ಥ್
ಕ.ಪ್ರ.ವಾರ್ತೆ ಮೈಸೂರು ನ. 3
ಕಾರ್ಮಿಕರಲ್ಲಿ ಕಾರ್ಮಿಕ ಕಾನೂನು ಬಗೆಗಿನ ತಿಳಿವಳಿಕೆ ಕಡಿಮೆ ಇದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶ್ವತ್ಥ್ ನಾರಾಯಣ್ ಅಭಿಪ್ರಾಯಪಟ್ಟರು.
ಎನ್ಐಪಿಎಂ ಮೈಸೂರು ಘಟಕವು ನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ಕೈಗಾರಿಕಾ ಕಾನೂನು- ಸವಾಲುಗಳು ಮತ್ತು ಸಮಸ್ಯೆಗಳು ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಮಿಕ ಕಾನೂನುಗಳ ಬಗ್ಗೆ ತಿಳಿದುಕೊಂಡು ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡುವುದು ಕಂಡು ಬರುತ್ತಿಲ್ಲ. ಇದರಿಂದ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು. ಎಷ್ಟೋ ಕಂಪನಿಗಳು ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಸಾಮರಸ್ಯದ ಕೊರತೆಯಿಂದ ಮುಚ್ಚಿಕೊಂಡಿವೆ. ಕಾರ್ಮಿಕರು ತಮಗಾದ ಅನ್ಯಾಯವನ್ನು ಕೋರ್ಟ್ ಮುಂದೆ ಸಾದರಪಡಿಸಲು ವಿಫಲರಾಗುತ್ತಿದ್ದಾರೆ. ಇದರಿಂದ ಮಾಲೀಕರು ಮತ್ತು ಕಾರ್ಮಿಕರು ಇಬ್ಬರಿಗೂ ನಷ್ಟವಾಗುತ್ತಿದೆ. ಹೀಗಾಗಿ ಎನ್ಐಪಿಎಂನ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಂಡು ಕಾರ್ಮಿಕರು ಮತ್ತು ಮಾಲೀಕರಿಗೆ ಕಾನೂನು ತಿಳಿವಳಿಕೆ ನೀಡಬೇಕಾಗಿದೆ ಎಂದು ಅವರು ತಿಳಿಸಿದರು. ಕೈಗಾರಿಕಾ ಆಡಳಿತ ಸಂಘದ ಅಧ್ಯಕ್ಷ ಎ.ಸಿ. ನರೇಂದ್ರ, ಕಾರ್ಖಾನೆಗಳ ನಿರ್ದೇಶಕ ಬಿ.ವಿ. ರವಿಕುಮಾರ್, ಎನ್ಐಪಿಎಂ ಕಾರ್ಯದರ್ಶಿ ವಿ.ಆರ್. ರಘುನಾಥನ್, ಬಿಇಎಂಇಎ ಮಾಜಿ ಅಧ್ಯಕ್ಷ ಎಚ್.ಬಿ. ಜಗದೀಶ್ ವಿಷಯ ಮಂಡಿಸಿದರು. ಎನ್ಐಪಿಎಂ ಕಾರ್ಯಕಾರಿ ಸಮಿತಿ ಸದಸ್ಯೆ ವಾಸಂತಿ ರೀನಾ ವಿಲಿಯಮ್ಸ್ ಭಾಗವಹಿಸಿದ್ದರು.