ಗದ್ದೆಗೆ ಕಾಡಾನೆ ದಾಳಿ; ಬೆಳೆ ನಾಶ
ಹುಣಸೂರು: ತಾಲೂಕಿನ ಗುರುಪುರ ಬಳಿಯ ಸ.ನಂ.25ರ ಗದ್ದೆ ಬಯಲು ಹಾಗೂ ಹೊಲಗಳಿಗೆ ಕಾಡಾನೆಗಳ ಹಿಂಡು ಶನಿವಾರ ರಾತ್ರಿ ದಾಳಿ ಇಟ್ಟು ಅಪಾರ ಬತ್ತ ಹಾಗೂ ಜೋಳ, ರಾಗಿ ಬೆಳೆ ನಾಶ ಮಾಡಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ತಾಲೂಕಿನ ಹನಗೋಡು ಅಣೆಕಟ್ಟಿನ ಅಚ್ಚುಕಟ್ಟು ವ್ಯಾಪ್ತಿಯ ನಾಲಾ ಬಯಲಿನ ಹುಣಸೂರಿನ ಶಂಕರ್‌ಗೆ ಸೇರಿದ ಎರಡು ಎಕರೆ, ಗುರುಪುರದ ಸಣ್ಣಶೆಟ್ಟರ ಅರ್ಧ ಎಕರೆ ಬತ್ತ ಮತ್ತು ಶಿವಣ್ಣರಿಗೆ ಸೇರಿದ ಎರಡುಎಕರೆ ಪ್ರದೇಶದ ರಾಗಿ, ರಾಜೇಗೌಡ, ಚೌಡಮ್ಮ, ರಾಮನಾಯ್ಕರ ಜೋಳದ ಬೆಳೆಯನ್ನು ತಿಂದು ತುಳಿದು ನಾಶಪಡಿಸಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ರಾತ್ರಿ ವೇಳೆ 15 ಕಾಡಾನೆಗಳ ಹಿಂಡು ನಾಡಿಗೆ ಧಾವಿಸಿ ಬಂದು ಅಪಾರ ಬೆಳೆ ನಷ್ಟಪಡಿಸಿವೆ. ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಕಳೆದ 3 ವರ್ಷದಿಂದ ಅರಣ್ಯದಂಚಿನ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದರಾದರೂ ಈ ಬಾರಿ ಅನುದಾನದ ಕೊರತೆಯಿಂದ ಕಾವಲು ಪಡೆ ಇಲ್ಲದ್ದರಿಂದಾಗಿ ರೈತರು ಬವಣೆ ಪಡುವಂತಾಗಿದೆ. ಸ್ಥಳಕ್ಕೆ ಅರಣ್ಯ ರಕ್ಷಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.