ತಂಬಾಕಿಗೆ ಉತ್ತಮ ಬೆಲೆ ನಿಗದಿಪಡಿಸುವಂತೆ ಕೋರಿಕೆ
ಕ.ಪ್ರ. ವಾರ್ತೆ, ಹುಣಸೂರು, ನ.3
ಮಾರುಕಟ್ಟೆಯಲ್ಲಿ ಕಂಪನಿಗಳು ಕಡಿಮೆ ಬೆಲೆಗೆ ತಂಬಾಕು ಖರೀದಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ರಕ್ಷಣೆಗೆ ಬರುವ ಮೂಲಕ ಉತ್ತಮ ಬೆಲೆ ಕೊಡಿಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಶೇ.30ರಷ್ಟು ತಂಬಾಕು ಮಾರಾಟವಾಗಿದ್ದು, ತಂಬಾಕು ಮಂಡಳಿಯ ನಿರ್ದೇಶನದಂತೆ ಉತ್ತಮ ದರ್ಜೆಯ ತಂಬಾಕನ್ನು ಮಾರಾಟ ಮಾಡಿದ್ದಾರೆ. ಈ ಭಾರಿ ಶೇ.60ರಷ್ಟು ಉತ್ತಮ ಹಾಗೂ ಅತಿ ಹೆಚ್ಚು ಮಳೆಯಿಂದಾಗಿ ಶೇ.40ರಷ್ಟು ಕಡಿಮೆ ದರ್ಜೆ ತಂಬಾಕು ಉತ್ಪಾದನೆಯಾಗಿದ್ದು. ಕೆಜಿಗೆ ಕೇವಲ 50- 60 ರು.ಗೆ ಕಂಪನಿಗಳು ಕೊಳ್ಳುತ್ತಿರುವುದರಿಂದ ಸರಾಸರಿ 90-100 ರು. ಮಾತ್ರ ಬೆಲೆ ಸಿಗುವಂತಾಗಿದೆ. ರೈತರು ಸಂಕಷ್ಟಕ್ಕೊಳಗಾಗುವ ಸ್ಥಿತಿಯಲ್ಲಿದ್ದಾರೆ ಎಂದರು.
ಪಕ್ಕದ ಆಂಧ್ರಪ್ರದೇಶದಲ್ಲಿ ಕೆ.ಜಿ.ಗೆ 200 ರು.ಗೆ ಖರೀದಿಸಿರುವ ಕಂಪನಿಗಳು ಅಲ್ಲಿಗಿಂತಲೂ ಉತ್ಕೃಷ್ಟ ದರ್ಜೆಯ ತಂಬಾಕು ನಮ್ಮ ರಾಜ್ಯದಾಗಿದ್ದರೂ ಬೆಲೆ ಮಾತ್ರ ಕಡಿಮೆ. ಹೀಗಾಗಿ ರೈತರು ಸಾಲದ ಸುಳಿಗೆ ಸಿಗುವ ಸಂಭವವಿದೆ. ಸುಮಾರು 7 ಲಕ್ಷ ಕುಟುಂಬಗಳು ತಂಬಾಕು ಬೆಳೆಯನ್ನು ಅವಲಂಬಿಸಿದ್ದಾರೆ. ಇನ್ನುಳಿದ ಶೇ.70ರಷ್ಟು ತಂಬಾಕನ್ನು ಇನ್ನು 2-3 ತಿಂಗಳಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಜೋಳ ಖರೀದಿ ಕೇಂದ್ರ ಒತ್ತಾಯ: ದಲ್ಲಾಳಿಗಳು ತಾಲೂಕಿನಾದ್ಯಂತ ಮುಸುಕಿನ ಜೋಳ ಖರೀದಿಯಲ್ಲಿ ಕಡಿಮೆ ಬೆಲೆ ನೀಡುತ್ತಿದ್ದು. ಬೆಳೆಯು ಸಹ ಇಳಿಮುಖವಾಗಿ 800ರಿಂದ 900 ರು.ಗೆ ಮಾತ್ರ ಖರೀದಿಸುತ್ತಿದ್ದಾರೆ. ಸರ್ಕಾರ ಕ್ವಿಂಟಾಲಿಗೆ 1400 ರು. ನಿಗದಿ ಪಡಿಸಿದೆಯಾದರೂ ಇನ್ನು ಖರೀದಿ ಕೇಂದ್ರ ಆರಂಭಿಸಿಲ್ಲ. ರೈತರು ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಜೋಳ ಮಾರಾಟ ಮಾಡಿದ್ದಾರೆ. ಉಳಿದ ರೈತರಿಗಾದರೂ ಉತ್ತಮ ಬೆಲೆ ಸಿಗಲು ಹುಣಸೂರು- ಪಿರಿಯಾಪಟ್ಟಣ- ಎಚ್.ಡಿ. ಕೋಟೆ ಸೇರಿದಂತೆ ಜಿಲ್ಲೆಯಾದ್ಯಂತ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.