ವೋಟ್ ಬ್ಯಾಂಕ್ ರಾಜಕೀಯ
ಕ.ಪ್ರ.ವಾರ್ತೆ ಮೈಸೂರು ನ. 3
ಶಾದಿಭಾಗ್ಯ ಯೋಜನೆ ಎಲ್ಲ ವರ್ಗಕ್ಕೂ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಮೈಸೂರು ಕೆಜೆಪಿ ಘಟಕವು ಬೆಂಬಲ ಸೂಚಿಸಿದೆ ಎಂದು ಕೆಜೆಪಿ ಮುಖಂಡ ಎಚ್.ವಿ. ರಾಜೀವ್ ಹೇಳಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರವು ವೋಟ್ ಬ್ಯಾಂಕ್‌ಗಾಗಿ ಕೇವಲ ಒಂದು ವರ್ಗದವರಿಗೆ ಯೋಜನೆಯನ್ನು ಪ್ರಕಟಿಸಿರುವುದು ಸರಿಯಲ್ಲ. ಎಲ್ಲರ ತೆರಿಗೆಯ ಹಣವನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದು. ಇದನ್ನು ಮರೆತ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಶಾದಿಭಾಗ್ಯ ಯೋಜನೆಯನ್ನು ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಯೋಜನೆಯ ಪ್ರಕಟಗೊಳ್ಳದಂತೆ ಮಾಡಲು ಪ್ರತಿಪಕ್ಷಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆದ ಕಾರಣ ನ.5ರವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದ್ದು, ಆಗಲೂ ಸ್ಪಂದಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ನಂತರ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ನ.7ರಿಂದ ಚಾಮರಾಜನಗರದಿಂದ ಹೋರಾಟ ಆರಂಭವಾಗಲಿದ್ದು, ಬೀದರ್‌ನಲ್ಲಿ ಅಂತ್ಯವಾಗಲಿದೆ ಎಂದರು. ಶಾದಿಭಾಗ್ಯದಂತಹ ಯೋಜನೆಯನ್ನು ಪ್ರಕಟಿಸುವ ಮುನ್ನ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಬೇಕಾಗಿತ್ತು. ಆಗೇನಾದರೂ ಎಲ್ಲರಿಂದಲೂ ಒಪ್ಪಿಗೆ ಸಿಕ್ಕರೆ ಪ್ರಾರಂಭಿಸಬಹುದಾಗಿತ್ತು. ಅದನ್ನು ಬಿಟ್ಟು ತಮಗೆ ಇಷ್ಟ ಬಂದವರಿಗೆ ಯೋಜನೆ ಪ್ರಕಟಿಸಲಾಗಿದೆ ಎಂದ ಅವರು, ಅನ್ನಭಾಗ್ಯ ಯೋಜನೆಯಡಿ ಎಪಿಎಲ್ ಕಾರ್ಡುದಾರರಿಗೂ ಕಡಿಮೆ ದರದಲ್ಲಿ ಅಕ್ಕಿ ವಿತರಿಸುವಂತೆ ಅವರು ಒತ್ತಾಯಿಸಿದರು.
ಕೆಜೆಪಿ ಜಿಲ್ಲಾಧ್ಯಕ್ಷ ಎಂ. ಅಪ್ಪಣ್ಣ, ಮುಖಂಡರಾದ ಯು.ಎಸ್. ಶೇಖರ್, ಪರಶಿವಮೂರ್ತಿ, ಮಹದೇವಯ್ಯ ಇದ್ದರು.