ಹೊಸೂರು ಮಹದೇಶ್ವರಸ್ವಾಮಿ ದೀಪಾವಳಿ ಜಾತ್ರೆ
ಕ.ಪ್ರ. ವಾರ್ತೆ, ಮೈಸೂರು, ನ.3
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸೂರಿನಲ್ಲಿ ಐದು ದಿನಗಳ ಕಾಲ ಏರ್ಪಡಿಸಿರುವ ಮಹದೇಶ್ವರಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವ ಶನಿವಾರ ಆರಂಭವಾಯಿತು.
ಮಹದೇಶ್ವರಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಆಯೋಜಿರುವ ಈ ಕಾರ್ಯಕ್ರಮದಲ್ಲಿ ಭಾನುವಾರ ಇಲ್ಲಿನ ಚಂದಗಾಲ ಗ್ರಾಮದ ಕಾವೇರಿ ನದಿಯಿಂದ ಆರಂಭವಾದ ಹಾಲಹರವಿ ಉತ್ಸವದಲ್ಲಿ ಹೆಬ್ಬಾಡಿ ಹುಂಡಿ ಗ್ರಾಮದ ಬಸವ ಹಾಗೂ ಮಂಗಳ ವಾದ್ಯ ಮತ್ತು ವಿದ್ಯುತ್ ದೀಪಾಲಂಕಾರದ ವಾಹನದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ದೇವಸ್ಥಾನ ತಲುಪಿತು. ನ.4ರಂದು ರುದ್ರಾಭಿಷೇಕ, ಹುಲಿವಾಹನ ಮತ್ತು ಪಂಜಿನ ಸೇವೆ ನಡೆಯಲಿದೆ.
5ರಂದು ರಥೋತ್ಸವ: ನ.5ರಂದು ಸಂಜೆ 4ಕ್ಕೆ ಜರುಗಲಿರುವ ಪುಷ್ಪಾಲಂಕೃತ ರಥೋತ್ಸವವನ್ನು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಉದ್ಘಾಟಿಸುವರು. ಕಾಗಿನೆಲೆ ಶಿವಾನಂದ ಪುರಿ ಹಾಗೂ ಡಾ. ಭಾನುಪ್ರಕಾಶ್ ಶರ್ಮ ಅವರು ಸಾನ್ನಿಧ್ಯ ವಹಿಸುವರು.
ಶ್ರೀರಂಗಪಟ್ಟಣದ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸುವರು. ಹೈಕೋರ್ಟ್ ನ್ಯಾಯಾಧೀಶ ಚಂದ್ರಶೇಖರಯ್ಯ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಚಾಮರಾಜ ಶಾಸಕ ವಾಸು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅದೇ ದಿನ ಸಂಜೆ 6ಕ್ಕೆ ಬೆಂಗಳೂರಿನ ವೆಂಕಟಾದ್ರಿ ಸೀನಿ ವಿಷನ್ ತಂಡದವರು ಸಂಗೀತ ನೃತ್ಯ ಕಾರ್ಯಕ್ರಮ ನಡೆಸಿಕೊಡುವರು. ನ.6ರಂದು ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ. ನಂತರ ಕಾರ್ತಿಕ ಮಾಸದ ಪ್ರತಿ ಸೋಮವಾರದಂದು ದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ವಿ. ಕೃಷ್ಣೇಗೌಡ, ಉಪಾಧ್ಯಕ್ಷ ಪಾಪೇಗೌಡ ಹಾಗೂ ಸಂಚಾಲಕ ನಗುವಿನಹಳ್ಳಿ ವೆಂಕಟೇಶು ತಿಳಿಸಿದ್ದಾರೆ.