'ಅಭಿಮಾನ ಇದ್ದಲ್ಲಿ ಭಾಷೆ ಬೆಳವಣಿಗೆ'
ಕ.ಪ್ರ.ವಾರ್ತೆ ಟಿ.ನರಸೀಪುರ ನ. 4
ಕನ್ನಡ ನಾಡು, ನುಡಿ ಮೇಲೆ ಅಭಿಮಾನ ಎಂಬುದು ಇದ್ದಾಗ ಭಾಷೆಯ ಬೆಳವಣಿಗೆಯಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ನಟರಾಜು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿಯೇ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆಯೂ ಕಡಮೆಯಾಗುತ್ತಿರುವ ಕಾಣುತ್ತಿರುವಾಗ ಭಾಷೆಯ ಬೆಳೆವಣಿಗೆಯ ಬಗ್ಗೆ ಕನ್ನಡಿಗರಲ್ಲಿ ಅಭಿಲಾಸೆ ಮೂಡಬೇಕು ಎಂದರು.
ಕನ್ನಡ ಪ್ರಾಧ್ಯಾಪಕ ಎಚ್.ಎಂ. ಮಂಜುನಾಥ್ ಮಾತನಾಡಿ, ಶಿಕ್ಷಣ ನೀಡುವ ಮಾಧ್ಯಮವನ್ನು ಬದಲಾವಣೆ ಮಾಡಿದ ಪರಿಣಾಮ ಐತಿಹಾಸಿಕ ಪರಂಪರೆಯುಳ್ಳ ಕನ್ನಡ ಭಾಷೆ ಬೆಳವಣಿಗೆ ಕುಂಠಿಗೊಳ್ಳುತ್ತಿದೆ.
ರಾಜ್ಯವನ್ನಾಳುವ ನಾಯಕರಲ್ಲೂ ಭಾಷಾಭಿಮಾನದ ಇಚ್ಛಾಶಕ್ತಿ ಕ್ಷಿಣಿಸುತ್ತಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಶೇ.30ರಷ್ಟು ಮಾತ್ರ ಕನ್ನಡ ಮಾತನಾಡುವವರು ಇದ್ದಾರೆ ಎಂದು ವಿಷಾದಿಸಿದರು.
ಉಪನ್ಯಾಸಕ ಮುರಳೀಧರ, ವಿದ್ಯಾರ್ಥಿಗಳಾದ ಅರುಣಾ, ಲೋಕೇಶ್, ಸಿದ್ದರಾಜು ವಿಚಾರ ಮಂಡಿಸಿದರು. ಉಪನ್ಯಾಸಕ ಎಚ್.ಇ. ಉದಯಕುಮಾರ್, ನಾಗೇಂದ್ರಕುಮಾರ್, ನಾಗರತ್ನಮ್ಮ, ನಾಸೀರ್ ಅಹಮದ್, ನಿರಂಜನಬಾಬು ರೆಡ್ಡಿ, ಪುಟ್ಟಸ್ವಾಮಿ, ಪಾರ್ವತಿ, ಪೂರ್ಣಿಮಾ, ಉಮೇಶ್ ಇದ್ದರು.