ನಾಳೆ ಕಪಿಲಾ ನದಿಯ ಸೇತುವೆ ಲೋಕಾರ್ಪಣೆ
ಕ.ಪ್ರ.ವಾರ್ತೆ ಟಿ.ನರಸೀಪುರ ನ. 4
ಟಿ. ನರಸೀಪುರದಲ್ಲಿನ ಸಂಚಾರ ದಟ್ಟಣೆಯಲ್ಲಿ ಸುಧಾರಣೆ ತರಲು ಫ್ಲೈ ಓವರ್ ಮಾದರಿಯ ಕಪಿಲಾ ನದಿಯ ನೂತನ ಸೇತುವೆ ನ.6ರಂದು ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಸಮರ್ಪಣೆಯಾಗಲಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ಧಾರಿ 212ರ ಕಪಿಲಾ ನದಿಗೆ ನೂತನವಾಗಿ ನಿರ್ಮಾಣ ಮಾಡಿರುವ ಸೇತುವೆಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಸೋಮವಾರ ಸೇತುವೆ ಮತ್ತು ಸಮಾರಂಭದ ವೇದಿಕೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ 53 ಕೋಟಿ ವೆಚ್ಚದ ಬೃಹತ್ ಯೋಜನೆಯ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದು, ಸುಗಮ ಸಂಚಾರಕ್ಕೆ ಇನ್ನೆರಡು ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದರು. ಕಪಿಲಾ ನದಿಯ ಹಳೆಯ ಸೇತುವೆ ಕಿರಿದಾಗಿದ್ದ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿತ್ತು. ಸಂಚಾರ ಜಾಮ್ ಆಗುವುದನ್ನು ತಪ್ಪಿಸಿ, ಮುಕ್ತ ಸಂಚಾರಕ್ಕೆ ಮತ್ತೊಂದು ಸೇತುವೆ ಅಗತ್ಯವಿದ್ದುದ್ದರಿಂದ ಆರಂಭದಲ್ಲಿ 36 ಕೋಟಿ ರು.ಗೆ ಸೇತುವೆ ಯೋಜನೆಯನ್ನು ರೂಪಿಸಲಾಗಿತ್ತು. ನಿರ್ಮಾಣದ ಯೋಜನೆ ವಿಸ್ತರಣೆಯಾಗಿದ್ದರಿಂದ ಅಂತಿಮವಾಗಿ 53 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಯೋಜನೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.
ನ.6ರಂದು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಂ. ಮಲ್ಲಿಕಾರ್ಜುನ ಖರ್ಗೆ, ಕೆ. ರೆಹಮಾನ್ ಖಾನ್, ಎಂ. ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ. ಎಚ್.ಸಿ. ಮಹದೇವಪ್ಪ ಭಾಗವಹಿಸುವರು ಎಂದರು.
ಜಿಪಂ ಸದಸ್ಯ ಕೆ. ಮಹದೇವ, ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ, ಚಾ.ನಗರ ಎಪಿಎಂಸಿ ಅಧ್ಯಕ್ಷ ಆಲ್ದೂರ್ ಸಿ. ರಾಜಶೇಖರ್, ನರಸೀಪುರ ಎಪಿಎಂಸಿ ಅಧ್ಯಕ್ಷ ಎಂ. ರಾಜು, ಮುಖಂಡರಾದ ಕೆ. ಮುದ್ದೇಗೌಡ, ಬಿ. ಮನ್ಸೂರ್ ಆಲಿ, ಅಮ್ಜದ್ಖಾನ್ ಇದ್ದರು.