ಪಟಾಕಿ ಬಿಡಿ, ಹೊಸ ಬಟ್ಟೆ ತೊಡಿ
ಮೈಸೂರು: ಪರಿಸರಕ್ಕೆ ಹಾನಿ ಉಂಟು ಮಾಡುವ ಪಟಾಕಿ ಸಿಡಿಸುವುದನ್ನು ಬಿಟ್ಟು ಹೊಸ ಬಟ್ಟೆ ತೊಟ್ಟು ಸಡಗರದಲ್ಲಿ ದೀಪಾವಳಿ ಆಚರಿಸುವಂತೆ ಕೃಷ್ಣರಾಜ ಶಾಸಕ ಎಂ.ಕೆ. ಸೋಮಶೇಖರ್ ಕರೆ ನೀಡಿದರು.
ಜೆ.ಪಿ. ನಗರದ ಧರ್ಮಸಿಂಗ್ ಕಾಲೋನಿಯಲ್ಲಿ ಸೋಮವಾರ ದೀಪಾವಳಿ ಅಂಗವಾಗಿ ಸೀರೆ ಹಾಗೂ ಬಟ್ಟೆ ವಿತರಿಸಿ ಮಾತನಾಡಿದ ಅವರು, ಪಟಾಕಿಯಿಂದ ಅನೇಕ ಮಕ್ಕಳು ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಆದ್ದರಿಂದ ಪಟಾಕಿ ಸಿಡಿಸದೆ ಹೊಸ ಬಟ್ಟೆ ಧರಿಸಿ ಸಿಹಿ ತಿಂದು ಸಂಭ್ರಮಿಸುವುದು ಸೂಕ್ತ ಎಂದರು.
ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ, ಪ್ಯಾಂಟ್, ಶರ್ಟ್ ಹಾಗೂ ಮಕ್ಕಳಿಗೆ ಸಿದ್ಧ ಉಡುಪುಗಳು ಸೇರಿದಂತೆ ಸುಮಾರು 400 ಮಂದಿಗೆ ಬಟ್ಟೆ ವಿತರಿಸಿದರು.
ಮಾಜಿ ಮೇಯರ್ ನಾರಾಯಣ, ನಗರ ಪಾಲಿಕೆ ಸದಸ್ಯೆ ಉಮಾಮಣಿ ಮಾದೇಗೌಡ, ಮುಖಂಡರಾದ ಗುಣಶೇಖರ್, ರೂಪೇಶ್, ಶ್ರಿನಿವಾಸ್, ಸುರೇಶ್, ವಿಶ್ವನಾಥ್ ಇದ್ದರು.