ಪಟಾಕಿ ಹಾವಳಿಗೆ ವರುಣನ ಕಡಿವಾಣ
ಕ.ಪ್ರ.ವಾರ್ತೆ ಮೈಸೂರು ನ. 4
ಕಾರ್ತಿಕ ಮಾಸದ ಮೂರನೇ ದಿನದಂದು ಆಚರಿಸುವ ಬಲಿಪಾಡ್ಯಮಿಯ ದೀಪಾವಳಿ ಹಬ್ಬ ಹಾಗೂ ಪಟಾಕಿ ಸಂಭ್ರಮಕ್ಕೆ ಮಳೆರಾಯನ ಅಡ್ಡಿ ಸೋಮವಾರ ಎದುರಾಯಿತು.
ಸಂಜೆ ಮನೆಯ ಮುಂದೆ ಹಣತೆ ಹಚ್ಚುವುದು, ಮಕ್ಕಳು ಹೊಸ ಬಟ್ಟೆ ಧರಿಸಿ ಕುಟುಂಬದ ಸದಸ್ಯರೊಂದಿಗೆ ಸುರ್ಸುರ್ ಬತ್ತಿ ಹಾಗೂ ಹೂಕುಂಡ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಹಜ. ಆದರೆ ಸಂಜೆ 5 ಗಂಟೆಗೆ ಆರಂಭವಾದ ಜೋರಾದ ಮಳೆಯಿಂದ ಇಂತಹ ಸಡಗರಕ್ಕೆ ಸ್ವಲ್ಪ ಮಂಕು ಕವಿದ ವಾತಾವರಣ ಉಂಟಾಯಿತು.
ಮನೆಯಂಗಳದಲ್ಲಿ ನೀರು ನಿಂತ ಕಾರಣ ಪಟಾಕಿ ಠುಸ್ ಎನ್ನುವ ಆತಂಕ ಖರೀದಿಸಿದವರಲ್ಲಿ ಎದುರಾದರೆ, ಮಳೆಯ ಕಾರಣ ಪಟಾಕಿ ಕೊಳ್ಳುವವರ ಕೊರತೆಯನ್ನು ಮಾರಾಟಗಾರರು ಅನುಭವಿಸುವಂತಾಯಿತು. ನರಕ ಚತುರ್ಥಿಯಿಂದಲೇ ಪಟಾಕಿ ಒಡೆಯುವುದು ಸರ್ವ ಸಾಮಾನ್ಯವಾಗಿದ್ದರೂ, ಈ ಬಾರಿ ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮಗಳಲ್ಲಿ ಜನಜಾಗೃತಿ ಮೂಡಿಸಿದ ಕಾರಣ ಹಾಗೂ ಕಳೆದ ಮೂರು ದಿನಗಳಿಂದ ಸಂಜೆ ವೇಳೆ ಮಳೆ ಆದ ಕಾರಣ ಪಟಾಕಿ ಸದ್ದು ಕಡಿಮೆಯಾಯಿತು. “®ÚmÛP ¸mÛÖP’ ಎಂಬ ಪರಿಸರವಾದಿಗಳ ಜಾಗೃತಿಗೆ ವರುಣನ ಕೃಪೆ ಸೇರಿದ್ದು ಕಾಕತಾಳೀಯ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮನೆ ಮನೆಗಳಲ್ಲಿ ಹಬ್ಬದ ಪೂಜೆ ಮತ್ತು ವಿಶೇಷ ಭಕ್ಷ್ಯದ ತಯಾರಿ ಬೆಳಗ್ಗಿನಿಂದಲೇ ಕಂಡುಬಂತು. ಸಂಜೆ ಕೆಲವರು ತೈಲ ದೀಪಗಳನ್ನು ಹಚ್ಚಿದರೆ, ಮತ್ತೂ ಕೆಲವರೂ ತೈಲ ದೀಪ ಮಾದರಿಯ ವಿದ್ಯುತ್ ದೀಪಗಳನ್ನು ಹಚ್ಚಿದ್ದರು. ಬಡಾವಣೆಗಳಲ್ಲಿ ಕೆಲವು ಮನೆಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು.
ಯಾದವಗಿರಿಯ ಜ್ಞಾನಪ್ರಕಾಶ ಭವನದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯವು ಏರ್ಪಡಿಸಿದ್ದ ದೀಪಾವಳಿ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹಾಗೂ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಆನಂದ ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈಶ್ವರಿ ವಿಶ್ವ ವಿದ್ಯಾಲಯದ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಲಕ್ಷ್ಮೀಜಿ ದೀಪಾವಳಿ ಆಧ್ಯಾತ್ಮಿಕ ಸಂದೇಶ ನೀಡಿದರು.