ಮೈಸೂರು ಚಲೋ ಹೋರಾಟದ ದಾಖಲೆ ಕಳುಹಿಸಲು ಮನವಿ
ಕ.ಪ್ರ.ವಾರ್ತೆ ಮೈಸೂರು ನ. 4
ಮೈಸೂರು ಚಲೋ ಚಳವಳಿಯ ಫಲವಾಗಿ 1947 ಅ.24ರಂದು ಪ್ರಜಾಪ್ರಭುತ್ವವು ಹಳೇ ಮೈಸೂರು ರಾಜ್ಯದಲ್ಲಿ ಸ್ಥಾಪನೆ ಆದದ್ದನ್ನು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿ, 10 ಲಕ್ಷ ಬಿಡುಗಡೆ ಮಾಡಿದೆ.
ಇದಕ್ಕಾಗಿ ರಾಜ್ಯ ಸರ್ಕಾರವನ್ನು ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್. ಜಗದೀಶ್ ಅಭಿನಂದಿಸಿದ್ದಾರೆ.
ಇದಕ್ಕೆ ಶ್ರಮಿಸಿದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ನಾವು ಅಭಾರಿಯಾಗಿದ್ದು, ಈ ಬಾರಿ ಸರ್ಕಾರವು ಅ.23ರ ಸಂಜೆ ಹಣ ಬಿಡುಗಡೆ ಮಾಡಿದ್ದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಲಿಲ್ಲ. ಇದನ್ನು ಮುಂದಿನ ವರ್ಷದಿಂದ ಪ್ರತಿ ವರ್ಷ ಸರ್ಕಾರದ ಕಾರ್ಯಕ್ರಮವಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದೆ ವೇಳೆ ಈ ಚಳವಳಿಯ ದಾಖಲೆಗಳನ್ನು ಉಳಿಸಿಕೊಳ್ಳಲು ಪುಸ್ತಕ ಹೊರತರಲು ಸರ್ಕಾರದ ಯೋಚನೆ ಇರುವುದರಿಂದ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರು ತಮ್ಮಲ್ಲಿರುವ ಈ ಚಳವಳಿಯ ಅಮೂಲ್ಯ ದಾಖಲೆಗಳು, ಛಾಯಾಚಿತ್ರಗಳನ್ನು ಅಥವಾ ಇಂತಹ ದಾಖಲೆಗಳು ಎಲ್ಲಿ ಲಭ್ಯವಿದೆ ಎಂಬ ವಿವರಗಳನ್ನು ಸಂಘಕ್ಕೆ ಕಳುಹಿಸುವಂತೆ ಜಗದೀಶ್ ಕೋರಿದ್ದಾರೆ.
ವಿಳಾಸ- ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರ ಸಂಘ, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ, ನಾರಾಯಣಶಾಸ್ತ್ರೀ ರಸ್ತೆ, ಮೈಸೂರು- 570 024, ಮೊ. 93422 77333.