ಸಿದ್ದರಾಮಯ್ಯರಿಂದ ಹಿಂದು ಜನಾಂಗ ದಮನ; ಆರೋಪ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದು ಜನಾಂಗವನ್ನು ದಮನ ಮಾಡಲು ಹೊರಟಿದ್ದಾರೆ ಎಂದು ಹಿರಿಯ ನಾಗರಿಕ ತಮ್ಮಯ್ಯ ಆರೋಪಿಸಿದ್ದಾರೆ.
ಮುಸ್ಲಿಂ ಜನಾಂಗದ ಬಡ ಹೆಣ್ಣು ಮಕ್ಕಳಿಗೆ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿ, ಮಂಚ, ಹಾಸಿಗೆ. ದಿಂಬು, ಬೆಡ್ಸೀಟ್ ಹಾಗೂ ಅಡುಗೆ ಸಾಮಾನುಗಳನ್ನು ಜತೆಗೆ ಹಣವನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿರುವುದು ಯಾರ ಹಣದಿಂದ ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ರು.ಗೆ ಒಂದು ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯ ವ್ಯವಸ್ಥೆಯು ಸರಿಯಿಲ್ಲ. ಸಾವಿರಾರು ಹಾಗೂ ಲಕ್ಷಗಟ್ಟಲೆ ಆದಾಯ ಇರುವಂಥವರಿಗೂ ಸಹ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಇವರಿಗೆ ಅಧಿಕಾರ ಸಿಕ್ಕಿರುವುದು ರಾತ್ರಿಯಲ್ಲಿ ಹಗಲುಗನಸು ಕಂಡಂತಾಗಿದೆ. ಹಿಂದು ಸಮಾಜದಲ್ಲಿ ಬಡವರಿಲ್ಲವೆ ಹಾಗೂ ಅವರ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡಬೇಕಲ್ಲವೆ ಎಂದಿದ್ದಾರೆ.
ಮತಬ್ಯಾಂಕ್ಗಾಗಿ ಇಂತಹ ಆಶ್ವಾಸನೆಗಳನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ತಮ್ಮ ಜನಾಂಗವನ್ನು ದೂರ ಇಡುವ ಕೆಲಸ ಮಾಡುತ್ತಿದ್ದಾರೆ. ಜಾತಿ ನಿಂದನೆ ಮಾಡಲಾಗುತ್ತಿದ್ದು ನಾವು ಬೌದ್ಧ ಮತವನ್ನು ಸ್ವೀಕರಿಸುವುದು ಸರಿ ಎನ್ನುತ್ತಾರೆ. ಆದರೆ ಈ ರೀತಿ ಬೇರೆ ಸಮುದಾಯವನ್ನು ದೂರುವುದಕ್ಕಿಂತ ತಮ್ಮ ಜನಾಂಗದ ಎಡಗೈ ಮತ್ತು ಬಲಗೈ ಜನರನ್ನು ಬೆಸೆಯುವ ಕೆಲಸ ಮಾಡಲಿ ಎಂದು ಅವರು ಸಲಹೆ ನೀಡಿದ್ದಾರೆ. ದಸರಾ ವೇಳೆಯಲ್ಲಿ ಅರಮನೆ ಪ್ರವೇಶಕ್ಕೆ ನಕಲಿ ಪಾಸ್ಗಳನ್ನು ಸೃಷ್ಟಿಸಿದವರು ಯಾರು ಹಾಗೂ ಅವರ ಮೇಲೆ ಈವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.