ಎಸ್.ಆರ್. ಹಿರೇಮಠ್ ಸೇರಿ ಐವರಿಗೆ ಕರ್ನಾಟಕ ಕಣ್ಮಣಿ ಪ್ರಶಸ್ತಿ
ಮೈಸೂರು: ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರ ತಂತ್ರಜ್ಞಾನ ಕೇಂದ್ರವು ಎಸ್.ಆರ್. ಹಿರೇಮಠ್ ಸೇರಿದಂತೆ ಐವರಿಗೆ 'ಕರ್ನಾಟಕ ಕಣ್ಮಣಿ' ಹೆಸರಿನ ರಾಜ್ಯ ಪ್ರಶಸ್ತಿಯನ್ನು ನೀಡಲಿದೆ.
ಜಗನ್ಮೋಹನ ಅರಮನೆಯಲ್ಲಿ ಅ.25ರ ಸಂಜೆ 4ಕ್ಕೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರದ ಎಸ್.ಆರ್. ಹಿರೇಮಠ್, ವೈದ್ಯಕೀಯ ಮಾನಸಿಕ ಆರೋಗ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಶಿವಮೊಗ್ಗದ ಡಾ.ಕೆ.ಎ. ಅಶೋಕ್ ಪೈ, ಕನ್ನಡ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ದೂರದರ್ಶನ ಕೇಂದ್ರದ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ, ಕ್ರೀಡಾ ಕ್ಷೇತ್ರದಲ್ಲಿ ಮಾಲತಿ ಹೊಳ್ಳ, ಉದ್ಯೋಗಾವಕಾಶ ಅಭಿವೃದ್ಧಿ ಕ್ಷೇತ್ರದಲ್ಲಿ ಎಂ. ಜಗನ್ನಾಥ ಶೆಣೈ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ. ವರ್ಷ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆ ಮುಂದಿನ ದಿನಗಳಲ್ಲಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾದರಿ ಗ್ರಾಮ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲದೆ ಕೌಟುಂಬಿಕ ಹಾಗೂ ಉದ್ಯಮ ಸಂಬಂಧಿಸಿದ ಸಲಹೆ ಹಾಗೂ ಆಪ್ತ ಸಮಾಲೋಚನಾ ಕೇಂದ್ರವನ್ನು ಗೋಕುಲಂನಲ್ಲಿ ತೆರೆಯಲು ಉದ್ದೇಶಿಸಿದೆ. ಇದರೊಂದಿಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರ್ಥಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಗುರಿ ಹೊಂದಿದೆ ಎಂದರು.