ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಗಳ ರೇಪ್: ಅಪ್ಪನ ಸೆರೆ

Rashmi Kasaragodu
Updated On : 2 Oct 2013, 11:12 am

ಮೈಸೂರು: ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಅಪ್ಪನನ್ನು ಮೈಸೂರಿನ ಮಂಡಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬನ್ನಿಮಂಟಪದ ವಂದೇ ಮಾತರಂ ಸ್ಲಂ ನಿವಾಸಿ ಕೃಷ್ಣಪ್ಪ(45) ಬಂಧಿತ ಆರೋಪಿ. ಈತನು ಕೂಲಿ ಕೆಲಸ ಮಾಡಿಕೊಂಡಿದ್ದಾನೆ. ವಾರದ ಹಿಂದೆ ತನ್ನ ಮೊದಲ ಪತ್ನಿಯ 6 ವರ್ಷದ ಪುತ್ರಿಯ ಮೇಲೆ ಕೃಷ್ಣಪ್ಪ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಕುಟುಂಬದವರನ್ನು ಬೆದರಿಸಿದ್ದ. ಸ್ಥಳೀಯರಿಗೆ ಈ ವಿಚಾರ ಗೊತ್ತಾಗಿ ಕೃಷ್ಣಪ್ಪನಿಗೆ ಧರ್ಮದೇಟು ಕೊಟ್ಟರು.
ಈ ಸಂಬಂಧ ಮಂಡಿ ಠಾಣೆ ಇನ್ಸ್‌ಪೆಕ್ಟರ್ ಟಿ.ಬಿ. ರಾಜಣ್ಣ, ಎಸ್‌ಐ ಶಬ್ಬೀರ್ ಹುಸೇನ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಕೃಷ್ಣಪ್ಪನನ್ನು ಬಂಧಿಸಿದ್ದಾರೆ. ಬಾಲಕಿ ಮತ್ತು ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗೊಳಪಡಿಸಿ, ತನಿಖೆ ಮುಂದುವರೆಸಿದ್ದಾರೆ.

ಅತ್ಯಾಚಾರ: ಬಂಧನ
ಮಳವಳ್ಳಿ:
ಕಾಲೇಜು ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಳಕವಾಡಿ ಠಾಣೆ ವ್ಯಾಪ್ತಿಯ ಬೆಳಗೆರೆ ಗ್ರಾಮದಲ್ಲಿ ಜರುಗಿದೆ.
ವಿದ್ಯಾರ್ಥಿಯೊಬ್ಬಳನ್ನು ಮಾತನಾಡಿಸುವ ನೆಪದಲ್ಲಿ ಸೆ.27ರ ಮಧ್ಯಾಹ್ನ ಅವರ ಮನೆಯೊಳಗೆ ಪ್ರವೇಶಿಸಿದ ಅದೇ ಗ್ರಾಮದ ಮಾದಯ್ಯ ಎಂಬುವರ ಮಗ ದೊರೆಸ್ವಾಮಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ. ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ್ದಾನೆ. ಮಾರನೇ ದಿನ ಯಾವುದೇ ತಪ್ಪು ಮಾಡಿಲ್ಲ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯರು ಬುದ್ಧಿ ಹೇಳಿದರೂ ಬೆಲೆ ಕೊಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ನೀಡಿದ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಾಲೆಗೆಸೆದು ಮಗು ಹತ್ಯೆ
ಮಳವಳ್ಳಿ:
ಮೂರು ತಿಂಗಳ ಹೆಣ್ಣು ಮಗುವೊಂದನ್ನು ಹೆತ್ತ ತಾಯಿಯೇ ನಾಲೆಗೆಸೆದು ಹತ್ಯೆಗೈದಿರುವ ಪ್ರಕರಣ ತಾಲೂಕಿನ ಕಿರುಗಾವಲು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಮಳವಳ್ಳಿ ಹೊರವಲಯದ ಮಾಗನೂರು ಗ್ರಾಮದ ವಾಸಿ ಶಿವಸ್ವಾಮಿ ಎಂಬವರ ಪತ್ನಿ ಜ್ಯೋತಿ ತನ್ನ ಕರುಳ ಬಳ್ಳಿಯನ್ನೇ ನಾಲೆಗೆ ಎಸೆದಿದ್ದು, ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಶಿವಸ್ವಾಮಿ ಹಾಗೂ ಜ್ಯೋತಿ ದಂಪತಿಗೆ ಈಗಾಗಲೇ ಮೂರು ವರ್ಷದ ಹೆಣ್ಣು ಮಗುವಿದೆ. ಈ ಮತ್ತೊಂದು ಹೆಣ್ಣಿಗೆ ಜನ್ಮ ನೀಡಿದ್ದು, ಪ್ರಕೃತಿ ಎಂದು ಹೆಸರಿಟ್ಟಿದ್ದರು.
ಹೆಣ್ಣು ಮಗುವನ್ನು ಸಾಕಲಾಗದ ಕಾರಣ ನಾಲೆಗೆ ಎಸೆದಿರುವುದಾಗಿ ಜ್ಯೋತಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ತಂಗಿಗೆ ಬರೆ ಎಳೆದ ಅಕ್ಕ!
ಬಾಗೇಪಲ್ಲಿ:
ಮನೆ ಕೆಲಸ ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಬಾಲಕಿಯೊಬ್ಬಳ ಎರಡೂ ಕೈಗಳಿಗೆ ಬರೆ ಹಾಕಿರುವ ಘಟನೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಹೆತ್ತವರು ಇಲ್ಲದ ಕಾರಣಕ್ಕೆ ಬಾಲಕಿ ಸುರೇಖಾ ತನ್ನ ಅಕ್ಕ ಹಾಗೂ ಭಾವ ಜತೆಯಲ್ಲಿ ವಾಸವಾಗಿದ್ದಳು. ಸುರೇಖಾಳನ್ನು ಶಾಲೆ ಬಿಡಿಸಿ ಮನೆಯಲ್ಲಿ ಕೆಲಸ ಮಾಡಲು ಇಟ್ಟುಕೊಳ್ಳಲಾಗಿತ್ತು. ಮನೆಯಲ್ಲಿ ಕಸ ಹೊಡೆಯಲಿಲ್ಲವೆಂದು ಸಿಟ್ಟಾದ ಸೋದರಿ ಚಾಕು ಕಾಯಿಸಿ ಬರೆ ಎಳೆದಿದ್ದಾಳೆ.
ಅಕ್ಕಪಕ್ಕದವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement